
ಚಿಕ್ಕಮಗಳೂರು: ರಾಜ್ಯದಲ್ಲಿ ವಂದೇ ಮಾತರಂ ಹಾಡಿನ ವಿಚಾರವಾಗಿ ಕೈ-ಕಮಲದ ನಡುವೆ ಜಟಾಪಟಿ ನಡೆಯುತ್ತಿರುವ ಬೆನ್ನಲ್ಲೇ, ಇದೀಗ ಚಿಕ್ಕಮಗಳೂರಿನ ಹಿಂದೂ ಮಹಾ ಗಣಪತಿ ವಂದೇ ಮಾತರಂ ವಿವಾದಕ್ಕೆ ಎಂಟ್ರಿ ಕೊಟ್ಟಿದೆ. ಸರ್ಕಾರ ವಂದೇ ಮಾತರಂನ ಮೊದಲ ಎರಡು ಚರಣಗಳಿಗೆ ಮಾತ್ರ ಸೀಮಿತವಾಗಿರುವುದನ್ನು ವಿರೋಧಿಸಿರುವ ಹಿಂದೂ ಕಾರ್ಯಕರ್ತರು, ಹಿಂದೂ ಮಹಾ ಗಣಪತಿಯ ಮೆರವಣಿಗೆ ವೇಳೆ ಪೂರ್ಣ ವಂದೇ ಮಾತರಂ ಹಾಡಲು ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಮಹಾ ಗಣಪತಿ ಸೇವಾ ಸಂಘದಿಂದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಚಿಕ್ಕಮಗಳೂರು ನಗರದ ಏಳು ಪ್ರಮುಖ ವೃತ್ತಗಳಲ್ಲಿ ಯಾವ ವೃತ್ತದಲ್ಲಿ ಪೂರ್ಣ ವಂದೇ ಮಾತರಂ ಹಾಡಬೇಕು ಎಂಬ ಬಗ್ಗೆ ಜನರಿಂದ ಅಭಿಪ್ರಾಯ ಕೇಳಲಾಗಿದೆ ಎಂದು ತಿಳಿದು ಬಂದಿದ್ದು, ಸಾರ್ವಜನಿಕರು ಎಲ್ಲಾ ವೃತ್ತಗಳಲ್ಲೂ ವಂದೇ ಮಾತರಂ ಹಾಡೋಣ ಎಂದು ಕಾಮೆಂಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಶನಿವಾರ ಚಿಕ್ಕಮಗಳೂರಿನ ಹಿಂದೂ ಮಹಾ ಗಣಪತಿ ವಿಸರ್ಜನೆಗೊಳ್ಳಲಿದ್ದು, ಮೆರವಣಿಗೆ ವೇಳೆ ವಂದೇ ಮಾತರಂ ಸಂಪೂರ್ಣ ಹಾಡನ್ನು ಹಾಡುವ ವಿಚಾರ ಇದೀಗ ಕೇಳಿಬಂದಿದೆ.




