
ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಕಾಡಾನೆಗಳ ಭೀತಿ ಮುಂದುವರಿದಿದ್ದು, ಚಿಕ್ಕಮಗಳೂರು ತಾಲೂಕಿನ ಬಸರವಳ್ಳಿ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಹೊರನಾಡು ಹಾಗೂ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಕಾಡಾನೆ, ಬೈಕ್ ಸವಾರನನ್ನು ಹಿಂಬಾಲಿಸಿಕೊಂಡು ಬಂದಿದ್ದು, ರಸ್ತೆ ಮಧ್ಯೆ ಒಂಟಿ ಸಲಗ ಕಂಡು ವಾಹನ ಸವಾರರು ಹಾಗೂ ಪ್ರವಾಸಿಗರು ಆತಂಕಗೊಂಡರು. ಈ ವೇಳೆ ಸೋಲಾರ್ ತಂತಿಗೆ ಭಯಗೊಂಡ ಕಾಡಾನೆ ಬಂದ ದಾರಿಯಲ್ಲೇ ವಾಪಸ್ಸಾಗಿದೆ. ಕಾಡಾನೆ ಸಂಚಾರದಿಂದ ಕೆಲಕಾಲ ವಾಹನ ಸವಾರರಲ್ಲಿ ಭೀತಿ ಉಂಟಾಗಿದ್ದು, ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಸಲಗದ ಚಲನ-ವಲನದ ಮೇಲೆ ನಿಗಾ ವಹಿಸಿದ್ದು, ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಮನವಿ ಮಾಡಿದ್ದಾರೆ.




