
ಕಾರ್ಕಳ : ಅಧಿಕಾರಿಗಳು ಬುದ್ಧಿವಂತಿಕೆಯಿಂದ ಮಾತ್ರವಲ್ಲ, ಹೃದಯವಂತಿಕೆಯಿಂದಲೂ ಕಾರ್ಯನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಹಾಗೂ ಉಡುಪಿ ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಚಿವ ಯು.ಟಿ. ಖಾದರ್ ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಮಳೆಹಾನಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸರ್ಕಾರದ ಮುಖವಾಣಿಯಂತೆ ಕೆಲಸ ಮಾಡಬೇಕು, ಜನರ ಸಮಸ್ಯೆಗಳಿಗೆ 24 ಗಂಟೆಯೂ ಸ್ಪಂದಿಸಬೇಕು ಹಾಗೂ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಬಡವರ ಮನೆಗಳಿಗೆ ಖುದ್ದು ಭೇಟಿ ನೀಡಿ ಇಲಾಖಾ ಪ್ರಕ್ರಿಯೆಯ ಜೊತೆಗೆ ಸಾಂತ್ವನವನ್ನೂ ನೀಡಬೇಕು ಎಂದರು. ಕಾರ್ಕಳದಲ್ಲಿ 59 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ಎಲ್ಲ ಮನೆಗಳಿಗೂ ಪರಿಹಾರ ನೀಡಲಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದಾಗ, ಬಡವರ ಮನೆಗಳೇ ಹೆಚ್ಚಾಗಿ ಹಾನಿಯಾಗುವುದರಿಂದ ದೊಡ್ಡ ಮಟ್ಟದಲ್ಲಿ ಪರಿಹಾರ ಒದಗಿಸಿ, ಅದು ನಿಮ್ಮ ಕಿಸೆಯಿಂದಲ್ಲ ಸರ್ಕಾರದಿಂದ ನೀಡುವ ಹಣ ಎಂದು ಸಚಿವರು ಹೇಳಿದರು. ಇದೇ ವೇಳೆ ಕಾಪು ತಾಲೂಕಿನ ಮುದರಂಗಡಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿದ ಉಡುಪಿ ಜಿಲ್ಲಾ ಪೊಲೀಸರ ಕಾರ್ಯವೈಖರಿಯನ್ನು ಅಭಿನಂದಿಸಿದ ಅವರು, ಉತ್ತರ ಪ್ರದೇಶದಿಂದ ಕ್ರಿಮಿನಲ್ಗಳು ಕರ್ನಾಟಕಕ್ಕೆ ಬಂದರೂ ಉಳಿಗಾಲವಿಲ್ಲ ಎಂಬ ಸಂದೇಶವನ್ನು ಪೊಲೀಸರು ನೀಡಿದ್ದಾರೆ ಎಂದರು. ಕಾರ್ಕಳದಲ್ಲಿ 700ಕ್ಕೂ ಹೆಚ್ಚು ಬೀದಿ ನಾಯಿಗಳಿರುವ ಮಾಹಿತಿ ಪಡೆದ ಸಚಿವರು, ಸಂತಾನಹರಣ ಪ್ರಕ್ರಿಯೆ ಮೂಲಕ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು, ಇಲ್ಲವಾದರೆ ಮುಂದಿನ ವರ್ಷಗಳಲ್ಲಿ ಇದು ದೊಡ್ಡ ಸಮಸ್ಯೆಯಾಗಲಿದೆ ಎಂದು ಎಚ್ಚರಿಸಿದರು. ಕಾರ್ಕಳ ತಾಲೂಕಿನಲ್ಲಿ 342 ತರಗತಿ ಕೊಠಡಿಗಳು ಹಾಗೂ 50 ಆವರಣ ಗೋಡೆಗಳು ಅಪಾಯಕಾರಿಯಾಗಿರುವ ಮಾಹಿತಿ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಮೆಸ್ಕಾಂ ವ್ಯಾಪ್ತಿಯಲ್ಲಿ 955 ವಿದ್ಯುತ್ ಕಂಬಗಳು ಹಾನಿಯಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದಾಗ, ಕಂಬಗಳ ಗುಣಮಟ್ಟದ ಬಗ್ಗೆ ಹಾಸ್ಯಮಯವಾಗಿ ಪ್ರಶ್ನಿಸಿದ ಸಚಿವರು ದುರಸ್ತಿ ಕಾರ್ಯದ ಬಗ್ಗೆ ಮಾಹಿತಿ ಪಡೆದರು. ಅಪಾಯಕಾರಿ ಮರಗಳ ತೆರವು ವಿಚಾರದಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದರೆ ಎಫ್ಐಆರ್ ದಾಖಲಿಸುವ ಎಚ್ಚರಿಕೆ ನೀಡಿದರು. ಇದಕ್ಕೆ ಸಚಿವ ಯು.ಟಿ. ಖಾದರ್ ಕೂಡ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ, ಅಪಾಯಕಾರಿ ಮರಗಳನ್ನು ತೆರವುಗೊಳಿಸಿ ಎಂದು ಸೂಚಿಸಿದರು. ಫುಟ್ಬಾಲ್ ಆಡಬೇಡಿ, ಗೋಲ್ ಹಾಕಿ ಎಂದು ಅರಣ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು, ಈ ವರ್ಷ ಇರುವ ಸಮಸ್ಯೆ ಮುಂದಿನ ವರ್ಷ ಇರದಂತೆ ಮಾಡುವ ಅಧಿಕಾರಿಯೇ ನಿಜವಾದ ಬೆಸ್ಟ್ ಆಫೀಸರ್ ಎಂದು ಹೇಳಿದರು. ಕಾರ್ಕಳ-ಹೆಬ್ರಿ ವ್ಯಾಪ್ತಿಯಲ್ಲಿ ಒಂದೇ ಅಗ್ನಿಶಾಮಕ ಠಾಣೆ ಹಾಗೂ ಒಂದೇ ವಾಹನ ಇರುವ ಸಮಸ್ಯೆ, ಐದು ಸೇತುವೆಗಳ ದುರಸ್ತಿ, ಪಂಚಾಯತ್ಗಳ ಅನುದಾನ ಬಳಕೆ ಸೇರಿದಂತೆ ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದು ಅಗತ್ಯ ಕ್ರಮಕ್ಕೆ ಸೂಚಿಸಿದರು. ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶವೆಂದು ಘೋಷಿಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕಾಡಿನಲ್ಲಿ ವಾಸಿಸುವ ಜನರಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಶಾಸಕ ವಿ. ಸುನಿಲ್ ಕುಮಾರ್ ವಹಿಸಿದ್ದರು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಎಸ್ಪಿ ಹರಿರಾಮ್ ಶಂಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ: ಅರುಣ್ ಭಟ್ ಕಾರ್ಕಳ





