
ಮೈಸೂರು: ಜಿಲ್ಲೆಯ ನಂಜನಗೂಡಿನ ಚಾಮುಂಡಿ ಬಡಾವಣೆಯಲ್ಲಿ ನಡೆದ ಭಾರೀ ಮನೆ ಕಳ್ಳತನ ಪ್ರಕರಣ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೋಹನ್ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಮನೆ ಮಾಲೀಕರು ಆಸ್ಪತ್ರೆಗೆ ತೆರಳಿದ್ದ ಸಮಯವನ್ನು ಸದುಪಯೋಗಪಡಿಸಿಕೊಂಡ ಖದೀಮರು ಬೈಕ್ನಲ್ಲಿ ಬಂದು ಮನೆಯ ಹಿಂಭಾಗದ ಅಡುಗೆಮನೆಯ ಕಿಟಕಿಯ ರಾಡ್ ಮುರಿದು ಒಳನುಗ್ಗಿದ್ದಾರೆ. ಬಳಿಕ ನೇರವಾಗಿ ಮೇಲ್ಮಹಡಿಗೆ ತೆರಳಿದ ಕಳ್ಳರು ಅಲ್ಲಿದ್ದ ಕೋಣೆಯ ಬೀರು ಒಡೆದು ಅದರಲ್ಲಿದ್ದ ಸುಮಾರು 300 ಗ್ರಾಂ ಚಿನ್ನಾಭರಣ, 6.5 ಕೆಜಿ ಬೆಳ್ಳಿ ಸಾಮಗ್ರಿಗಳು ಹಾಗೂ ಲಕ್ಷಾಂತರ ರೂಪಾಯಿ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಕಳ್ಳತನ ನಡೆಸಿದ ಬಳಿಕ ಮನೆಯಲ್ಲಿದ್ದ ಸೂಟ್ಕೇಸ್ಗಳಲ್ಲಿಯೂ ಏನಾದರೂ ಬೆಲೆಬಾಳುವ ವಸ್ತುಗಳಿವೆಯೇ ಎಂಬುದನ್ನು ಪರಿಶೀಲಿಸಿರುವುದು ತಿಳಿದುಬಂದಿದೆ. ಮನೆ ಮಾಲೀಕರು ಆಸ್ಪತ್ರೆಯಿಂದ ವಾಪಸ್ಸು ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ನಂಜನಗೂಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಕಳ್ಳರು ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ದೋಚಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.





