
ಕೊಳ್ಳೇಗಾಲ : ಉರಗಗಳು ಆಹಾರ ಸರಪಳಿಯ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು, ಅಡವಿ ಅಲರ್ಟ್ ಫೌಂಡೇಶನ್, ಸಂಸ್ಥಾಪಕರು, ಮೈಸೂರು ಹಾಗೂ ಸ್ನೇಕ್ಸ್ ಆಫ್ ಮೈಸೂರ್ / ಉರಗ ತರಂಗಗಳು ಪುಸ್ತಕದ ಲೇಖಕರಾದ ಪವನ್ ಜೋಶಿ ಅವರು ತಿಳಿಸಿದರು.
ತಾಲ್ಲೂಕಿನ ತಿಮ್ಮರಾಜಿಪುರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ,ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ, ವನ್ಯ ಜೀವಿ ವಲಯ ಕೊಳ್ಳೇಗಾಲದ ವತಿಯಿಂದ ಆಯೋಜಿಸಿದ್ದ ಉರಗಗಳ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಲಿಗಳು ವರ್ಷಕ್ಕೆ ಅಂದಾಜು 800 ಮರಿಗಳನ್ನು ಹಾಕುತ್ತವೆ, ಇವುಗಳನ್ನು ಹಾವುಗಳು ತಿಂದು ಆಹಾರ ವ್ಯವಸ್ಥೆಯೆಲ್ಲಾಗುವ ವ್ಯತಿರಿಕ್ತ ಪರಿಣಾಮವನ್ನು ತಡೆಯುತ್ತವೆ,ಭಾರತ ದೇಶದಲ್ಲಿ ಅಂದಾಜು 250ರಿಂದ 350 ಪ್ರಭೇದದ ಹಾವುಗಳಿದ್ದು, ಎಲ್ಲವೂ ವಿಷಪೂರಿತ ವಾಗಿರದೆ, ಕೆಲವು ಪ್ರಭೇದಗಳಾದ ಸಾಮಾನ್ಯ ಕಟ್ಟಾವು, ಕೊಳಕಮಂಡಲ, ನಾಗರಹಾವು ಮತ್ತು ಗರಗಸ ಮಂಡಲ ಹಾವು ವಿಷಪೂರಿತವಾಗಿರುತ್ತವೆ, . ಅವುಗಳ ಬಗ್ಗೆ ಸಾಮಾನ್ಯ ಜ್ಞಾನವನ್ನು ಹೊಂದಿದ್ದರೆ, ಕಚ್ಚಿರುವ ಹಾವು ವಿಷಪೂರಿತವೋ ಅಲ್ಲವೋ ಎಂಬುದು ಖಾತ್ರಿಯಾದರೆ ಸೂಕ್ತ ಚಿಕಿತ್ಸೆಯನ್ನು ಪಡೆಯಲು ಅನುಕೂಲವಾಗುತ್ತದೆ, ಹಾವು ಕಚ್ಚಿದ ಕೂಡಲೇ ಆತಂಕಕ್ಕೆ ಒಳಗಾಗದೆ, ಮನೆ ಮದ್ದು, ಸಾಂಪ್ರದಾಯಿಕ ಚಿಕಿತ್ಸೆಗಳನ್ನು ಕೊಡಿಸದೆ, ಕೂಡಲೇ ಸಮೀಪದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕೆಂದು ಸಲಹೆ ನೀಡಿದರು. ವಿಷಪೂರಿತ ಹಾವುಗಳಿಂದ ಕಡಿತಕ್ಕೊಳಗಾದರೆ “ಆಂಟಿವೇನಂ ” ಮಾತ್ರ ಸರಿಯಾದ ಔಷಧಿಯಾಗಿರುತ್ತದೆ ಇದನ್ನು ಹೊರತುಪಡಿಸಿ ಇತರೆ ಮೂಢನಂಬಿಕೆಗಳಿಂದ ಯಾವುದೇ ರೀತಿಯ ಚಿಕಿತ್ಸೆಯನ್ನು ಪಡೆಯಬಾರದು ಎಂದು ತಿಳಿಸಿದರು. ಹಿಮಗಿರಿ ಸಂಸ್ಥೆಯ ರಘುರಾಮ್ ಹಾವುಗಳ ಜೀವನಶೈಲಿ ಆಹಾರ ಪದ್ಧತಿ ಅವುಗಳ ಉಪಯೋಗಗಳ ಬಗ್ಗೆ ತಿಳಿಸಿದರು. ಉರಗ ತರಂಗಗಳು ಕನ್ನಡ ಆವೃತ್ತಿ, ಸ್ನೇಕ್ಸ್ ಆಫ್ ಮೈಸೂರ್ ಇಂಗ್ಲಿಷ್ ಆವೃತ್ತಿಯ ಪುಸ್ತಕಗಳನ್ನು ಶಾಲೆಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶೋಯಬ್ ಪಾಷ, ಮಹೇಶ್ ಕೆ. ಶಿವಾನಂದಯ್ಯ, ಭರತ್, ಉಷಾ, ಗಸ್ತು ಅರಣ್ಯಪಾಲಕರಾದ ಸುನಿಲ್ ಬಸಪ್ಪ ಬೆಳವಿ,
ಸಂಜುನಾಥ ಆಯಟ್ಟಿ, ಅರಣ್ಯ ವೀಕ್ಷಕ ಆಕಾಶ್ ಸೋಪಾನ ಜೋಷಿ ಮತ್ತು ಸಿಬ್ಬಂದಿ ಹಾಜರಿದ್ದರು.





