
ಚಿಕ್ಕಮಗಳೂರು: ನಾಡಿನಲ್ಲೇ ಅಲ್ಲ ಕಾಡಲ್ಲೂ ಕಳ್ಳರ ಕಾಟ ಶುರುವಾಗಿದ್ದು, ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಮುತ್ತೋಡಿ ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆಗೆ ಕಳ್ಳರು ಶಾಕ್ ನೀಡಿದ್ದಾರೆ. ಹುಲಿ ಗಣತಿ ಕಾರ್ಯಾಚರಣೆಗೆ ಅಳವಡಿಸಲಾಗಿದ್ದ ಎರಡು ಟ್ರ್ಯಾಪ್ ಕ್ಯಾಮೆರಾಗಳನ್ನು ಕಿಡಿಗೇಡಿಗಳು ಕಳವು ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆ ಡೀಮ್ಡ್ ಫಾರೆಸ್ಟ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಅಭಯಾರಣ್ಯಕ್ಕೆ ಪ್ರವೇಶಿಸಲು ಅನುಮತಿ ಕಡ್ಡಾಯವಾಗಿರುವ ಸೂಕ್ಷ್ಮ ಪ್ರದೇಶದಲ್ಲೇ ಈ ಕಳ್ಳತನ ನಡೆದಿದ್ದು, ಮೇ 4ರವರೆಗೆ ಕಾರ್ಯನಿರ್ವಹಿಸುತ್ತಿದ್ದ ಕ್ಯಾಮೆರಾಗಳು ಮೇ 5ರಿಂದ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಉಪವಲಯ ಅರಣ್ಯಾಧಿಕಾರಿ ಯಾಸೀನ್ ಬಾಷಾ ಅವರು ಅರಣ್ಯ ಪಾಲಕ ನಂದೀಶ್ ಜೊತೆ ಗಸ್ತು ವೇಳೆ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾಗಳನ್ನೇ ಕಳ್ಳರು ಟ್ರ್ಯಾಪ್ ಮಾಡಿ ಹೊತ್ತೊಯ್ದಿರುವುದು ಆತಂಕಕ್ಕೆ ಕಾರಣವಾಗಿದೆ. ಕಳುವಾದ ಎರಡು ಕ್ಯಾಮೆರಾಗಳ ಒಟ್ಟು ಮೌಲ್ಯ ಸುಮಾರು ₹40 ಸಾವಿರ ಎಂದು ಅಂದಾಜಿಸಲಾಗಿದ್ದು, ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಹುಲಿ ಗಣತಿ ಕಾರ್ಯಾಚರಣೆಗೆ ಅಡ್ಡಿಯಾಗಿರುವುದಲ್ಲದೆ, ಅರಣ್ಯ ಪ್ರದೇಶದ ಭದ್ರತೆ ಹಾಗೂ ಕಾಡು ಪ್ರಾಣಿಗಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಕರಣದ ಹಿಂದೆ ಕಾಡುಪ್ರಾಣಿ ಬೇಟೆಗಾರರು ಅಥವಾ ಮರಗಳ್ಳರ ಕೈವಾಡ ಇರಬಹುದೆಂಬ ಅನುಮಾನವೂ ವ್ಯಕ್ತವಾಗುತ್ತಿದೆ.




