
ಬೆಂಗಳೂರು: ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಕೇಂದ್ರ ಗೃಹ ಸಚಿವಾಲಯವು ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಾಗುವ ಪ್ರತಿಷ್ಠಿತ ‘ರಾಷ್ಟ್ರಪತಿ ಪದಕ-2026’ ಪ್ರಶಸ್ತಿಯನ್ನು ಘೋಷಿಸಿದೆ. ಈ ಬಾರಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಒಟ್ಟು 17 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಅತ್ಯಂತ ವಿಶಿಷ್ಟ ಹಾಗೂ ಸುದೀರ್ಘ ಸೇವೆ ಸಲ್ಲಿಸಿರುವ ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ (ACP) ಹೆಚ್.ಎನ್. ಧರ್ಮೇಂದ್ರ ಅವರಿಗೆ ಪ್ರತಿಷ್ಠಿತ ‘ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ’ ಗೌರವ ಒಲಿದುಬಂದಿದೆ. ಸುದೀರ್ಘ ಪೊಲೀಸ್ ಸೇವೆ ಹಾಗೂ ಕರ್ತವ್ಯನಿಷ್ಠೆಯನ್ನು ಪರಿಗಣಿಸಿ ನೀಡಲಾಗುತ್ತಿರುವ ಈ ಗೌರವವು ಕರ್ನಾಟಕ ಪೊಲೀಸ್ ಇಲಾಖೆಗೆ ಹೆಮ್ಮೆಯ ಸಂಗತಿಯಾಗಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶಾದ್ಯಂತ ಈ ಪ್ರತಿಷ್ಠಿತ ಪದಕಗಳನ್ನು ಪ್ರದಾನ ಮಾಡಲಾಗುತ್ತದೆ. ಕರ್ನಾಟಕದ 17 ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಲಭಿಸಿರುವುದು ರಾಜ್ಯ ಪೊಲೀಸ್ ಇಲಾಖೆಯ ಸೇವಾ ಬದ್ಧತೆಗೆ ಮತ್ತೊಂದು ಗೌರವವಾಗಿದೆ.



