
ಬೆಂಗಳೂರು: ರೈಲ್ವೆ ಮಂಡಳಿಯು 2026ನೇ ಸಾಲಿನ ಗ್ರೂಪ್ ಡಿ, ಅಂದರೆ ಲೆವೆಲ್-1 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ದೇಶಾದ್ಯಂತ ರೈಲ್ವೆಯ ವಿವಿಧ ವಲಯಗಳು ಹಾಗೂ ಉತ್ಪಾದನಾ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆಯನ್ನು ಮೌಲ್ಯಮಾಪನ ಮಾಡಿ ವಿವರ ಸಲ್ಲಿಸುವಂತೆ ರೈಲ್ವೆ ಮಂಡಳಿ ಸೂಚಿಸಿದೆ. ಈ ಪ್ರಕ್ರಿಯೆಯಲ್ಲಿ 30 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಪ್ರತಿ ರೈಲ್ವೆ ವಲಯವು ತಮ್ಮ ಖಾಲಿ ಹುದ್ದೆಗಳ ವಿವರಗಳನ್ನು ಆಗಸ್ಟ್ 20ರೊಳಗೆ ಸಲ್ಲಿಸಬೇಕಿದೆ. ಬಳಿಕ ಹುದ್ದೆಗಳ ಅಂತಿಮ ಸಂಖ್ಯೆ ನಿಗದಿಯಾಗಲಿದ್ದು, ಸೆಪ್ಟೆಂಬರ್ ಅಥವಾ ಅಕ್ಟೋಬರ್ 2026ರಲ್ಲಿ ಅಧಿಕೃತ ನೇಮಕಾತಿ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ. ಈ ನೇಮಕಾತಿಗೆ 10ನೇ ತರಗತಿ ಅಥವಾ ITI ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗುವ ಸಾಧ್ಯತೆ ಇದೆ.



