
ನವದೆಹಲಿ: ದೇಶದ ಪ್ರಮುಖ ಕೇಂದ್ರ ಸರ್ಕಾರಿ ವಲಯದ ಸಂಸ್ಥೆಯಾದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC) ಅನುಭವಿ ಎಂಜಿನಿಯರಿಂಗ್ ವೃತ್ತಿಪರರಿಗೆ ಭರ್ಜರಿ ಉದ್ಯೋಗಾವಕಾಶ ನೀಡಿದೆ. NTPCಯಲ್ಲಿ ಖಾಲಿ ಇರುವ ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದ್ದು, ಒಟ್ಟು 135 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಹಾಗೂ ಕಂಟ್ರೋಲ್ ಮತ್ತು ಇನ್ಸ್ಟ್ರುಮೆಂಟೇಶನ್ ವಿಭಾಗಗಳಲ್ಲಿ ಈ ನೇಮಕಾತಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ E4 ದರ್ಜೆಯಲ್ಲಿ ತಿಂಗಳಿಗೆ 70 ಸಾವಿರ ರೂಪಾಯಿಯಿಂದ 2 ಲಕ್ಷ ರೂಪಾಯಿವರೆಗೆ ವೇತನ ದೊರೆಯಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ ಕನಿಷ್ಠ ಶೇ.60 ಅಂಕಗಳೊಂದಿಗೆ ಪೂರ್ಣಾವಧಿ BE ಅಥವಾ B.Tech ಪದವಿ ಪಡೆದಿರಬೇಕು. ಎಲೆಕ್ಟ್ರಿಕಲ್ ವಿಭಾಗಕ್ಕೆ ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ವಿಭಾಗಕ್ಕೆ ಮೆಕ್ಯಾನಿಕಲ್ ಅಥವಾ ಪ್ರೊಡಕ್ಷನ್, ಹಾಗೂ C&I ವಿಭಾಗಕ್ಕೆ ಇನ್ಸ್ಟ್ರುಮೆಂಟೇಶನ್, ಕಂಟ್ರೋಲ್ ಆ್ಯಂಡ್ ಇನ್ಸ್ಟ್ರುಮೆಂಟೇಶನ್ ಅಥವಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ ಪದವಿ ಹೊಂದಿರುವುದು ಕಡ್ಡಾಯವಾಗಿದೆ.




