
ಪಶ್ಚಿಮ ಘಟ್ಟದ ಸಂರಕ್ಷಣೆಗಾಗಿ ರೂಪಿಸಲಾದ ಸಮಗ್ರ ನೀತಿ ವೈಜ್ಞಾನಿಕವಲ್ಲ ಮತ್ತು ಸರಂಕ್ಷಣೆಗೆ ಪೂರಕವಾಗಿಲ್ಲ ಎಂದು ತಜ್ಞರೇ ಟೀಕಿಸಿದ್ದಾರೆ. ರಾಜ್ಯ ಸರ್ಕಾರವು ಜೀವನೋಪಾಯದ ಹೆಸರಿನಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯನ್ನು ವಿರೋಧಿಸುತ್ತಿದ್ದು, ಇಎಸ್ಐ ಜಾರಿಯ ದಿಕ್ಕಿನಲ್ಲಿ ಕಸ್ತೂರಿ ರಂಗನ್ ವರದಿಯು ಗುರುತಿಸಿದ್ದ ಪ್ರದೇಶವನ್ನು ಭೌತಿಕ ಸಮೀಕ್ಷೆ ಮೂಲಕ ಕಡಿಮೆ ಮಾಡಲು ಅವಕಾಶವಿದೆ. ಪರಿಸರ ಸೂಕ್ಷ್ಮ ಪ್ರದೇಶ ಎಂದು ಹೊರಡಿಸಿದ ಅಧಿಸೂಚನೆಗೆ ಆರು ರಾಜ್ಯಗಳು ಒಳಪಟ್ಟರೂ ಈ ಅವಕಾಶವನ್ನೂ ಇದುವರೆಗೆ ಬಳಸಿಕೊಂಡದ್ದು ಕೇವಲ ಕೇರಳ ರಾಜ್ಯ ಮಾತ್ರ. ಕಸ್ತೂರಿ ರಂಗನ್ ವರದಿಯಲ್ಲಿ ಕೇರಳ ರಾಜ್ಯದ 13108 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿತ್ತು. ಭೌತಿಕ ಸಮೀಕ್ಷೆ ನಡೆಸಿದ ಕೇರಳ ಪರಿಷ್ಕರಣೆಗೆ ಪ್ರಸ್ತಾಪ ಸಲ್ಲಿಸಿದ ನಂತರ ಅದನ್ನು 9,993.7 ಚದರ ಕಿ.ಮೀಗೆ ಇಳಿಸಲಾಗಿದ್ದು, ಇತರೆ ರಾಜ್ಯಗಳು ಇಎಸ್ಎ ಅಧಿಸೂಚನೆಗೆ ತಮ್ಮ ಆಕ್ಷೇಪಣೆಗಳನ್ನು ಕೇಂದ್ರಕ್ಕೆ ಸಲ್ಲಿಸಿದರೂ ಕೇರಳದಂತೆ ಭೌತಿಕ ಸಮೀಕ್ಷೆ ನಡೆಸದೆ ವಿರೋಧ ವ್ಯಕ್ತಪಡಿಸಿರುತ್ತದೆ.
ಅಧಿಸೂಚನೆ ಪ್ರಕಾರ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿರುವ ಆರು ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ಹೆಚ್ಚು ಪ್ರದೇಶ ಇಎಸ್ಐ ಅಧಿಸೂಚನೆಯಲ್ಲಿ ಬರುತ್ತದೆ. ಕರ್ನಾಟಕದ 10 ಜಿಲ್ಲೆಗಳ ವ್ಯಾಪ್ತಿಯ 33 ತಾಲೂಕುಗಳ 1889 ಗ್ರಾಮಗಳು ಸೂಕ್ಷ್ಮ ಪರಿಸರದ ಅಧಿಸೂಚನೆಯಲ್ಲಿ ಉಲ್ಲೇಖವಾಗಿರುವುದರಿಂದ ಸುಮಾರು 20668 ಚದರ ಕಿ.ಮೀ ಈ ವೃತ್ತಿಗೆ ಸೇರಿಸಲ್ಪಟ್ಟರೆ, ಒಟ್ಟು 56825 ಚದರ ಕಿ.ಮೀ ವಿಸ್ತಾರದಲ್ಲಿ ಕರ್ನಾಟಕವೊಂದೇ 20668 ಚದರ ಕಿ.ಮೀ ಗೆ ಹೆಚ್ಚು ಜಾಗ ಸೇರ್ಪಡೆಗೊಂಡಿದೆ. ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳೂ ಮೊದಲಿನಿಂದಲೂ ಈ ಕರಡು ಅಧಿಸೂಚನೆಯನ್ನು ವಿರೋಧಿಸುತ್ತಲೇ ಬಂದಿದ್ದು, ರಾಜ್ಯಗಳ ವಿರೋಧದಿಂದ ಕ್ಷೇತ್ರ ಸರ್ಕಾರಕ್ಕೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಪರಿಸರ ಸೂಕ್ಷ್ಮಪ್ರದೇಶ ಎಂದು ಅಂಗೀಕಾರವಾದರೆ, ಆ ಪ್ರದೇಶದಲ್ಲಿ ರಸ್ತೆ, ಕುಡಿವನೀರು, ಕೃಷಿ ಚಟುವಟಿಕೆ ರಾಸಾಯನಿಕ ಬಳಕೆ, ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರ ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಪ್ರದೇಶ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ, ಮೂಲಭೂತಸೌಕರ್ಯಗಳನ್ನು ತಡೆಹಿಡಿಯಲು ಅವಕಾಶವಿದ್ದು, ರಾಜ್ಯದ ಜನತೆ ಆಕ್ಷೇಪಣೆ ಸಲ್ಲಿಸಲು ನೀಡಿರುವ 60 ದಿನಗಳನ್ನು ಸದ್ಬಳಕೆ ಮಾಡಿಕೊಂಡು, ಭೌತಿಕ ಸಮೀಕ್ಷೆ ನಡೆಸಿ ಆಕ್ಷೇಪಣೆ ಸಲ್ಲಿಸಿ, ನಿರ್ಲಿಪ್ತ ಭಾವದಿಂದ ಹೊರಬಂದು ನ್ಯಾಯಕ್ಕಾಗಿ ದ್ವನಿಗೂಡಿಸಿದರೆ ಜನರ ಆತಂಕ, ಗೊಂದಲ ನಿವಾರಣೆಯಾದೀತು.




