ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಟೋ ರಾಜ ಶಂಕರ್ ನಾಗ್ ಅವರ ಪುಣ್ಯಸ್ಮರಣೆ ಹಾಗೂ ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆಗಳ ಕುರಿತು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಶಂಕರ್ ನಾಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಸುರೇಶ್ ನಾಗ್ ಹರದನಹಳ್ಳಿ ಮಾತನಾಡಿ, ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ನಿರ್ದೇಶನ, ತಂತ್ರಜ್ಞಾನ ಹಾಗೂ ನಟನೆಯ ಮೂಲಕ ಕನ್ನಡದ ಕೀರ್ತಿಯನ್ನು ಬೆಳಗಿಸಿದವರು ಶಂಕರ್ ನಾಗ್ ಎಂದು ಸ್ಮರಿಸಿದರು. ಶಂಕರ್ ನಾಗ್ ಅವರ ದೂರದೃಷ್ಟಿಯ ಫಲವಾಗಿ ಮೆಟ್ರೋ ರೈಲು ಸೇರಿದಂತೆ ಹಲವು ಆಧುನಿಕ ಕಲ್ಪನೆಗಳು ಇಂದು ಸಾಕಾರಗೊಂಡಿವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಉಪನ್ಯಾಸಕ ಸುರೇಶ್ ಎನ್. ಋಗ್ವೇದಿ ಮಾತನಾಡಿ, ಶಂಕರ್ ನಾಗ್ ಅವರು ಪ್ರತಿಭಾನ್ವಿತ ನಟ, ನಿರ್ದೇಶಕ ಹಾಗೂ ದೂರದೃಷ್ಟಿಯ ಚಿಂತಕರಾಗಿದ್ದು, ತಮ್ಮ ಸಿನಿಮಾಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದರು. ವಿಶೇಷವಾಗಿ ‘ಆಟೋ ರಾಜ’ ಚಿತ್ರದ ಮೂಲಕ ಆಟೋ ಚಾಲಕರು ಹಾಗೂ ಮಾಲೀಕರಿಗೆ ಸಾಮಾಜಿಕ ಗೌರವ ಮತ್ತು ಘನತೆ ದೊರಕುವಂತೆ ಮಾಡಿದ ಶಂಕರ್ ನಾಗ್ ಅವರ ಕೊಡುಗೆಯನ್ನು ಸ್ಮರಿಸಿದರು. ನವೆಂಬರ್ 9ರಂದು ಶಂಕರ್ ನಾಗ್ ಅವರ ಜನ್ಮದಿನವನ್ನು ಆಟೋ ದಿನವಾಗಿ ಆಚರಿಸಿ, ಪ್ರತಿ ಊರಿನಲ್ಲೂ ಶಂಕರ್ ನಾಗ್ ಹಾಗೂ ಆಟೋ ಚಾಲಕರಿಗೆ ಗೌರವ ಸಲ್ಲಿಸುವ ಕಾರ್ಯ ನಡೆಯಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ‘ಒಂದಾನೊಂದು ಕಾಲದಲ್ಲಿ’, ‘ಒಂದು ಮುತ್ತಿನ ಕಥೆ’, ‘ಮಾಲ್ಗುಡಿ ಡೇಸ್’, ‘ಸೀತಾರಾಮ’, ‘ಮಿಂಚಿನ ಓಟ’, ‘ಸಾಂಗ್ಲಿಯಾನ’, ‘ಸಿಬಿಐ ಶಂಕರ್’ ಸೇರಿದಂತೆ ಅವರ ಹಲವು ಕೃತಿಗಳನ್ನು ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಬರಹಗಾರ ಲಕ್ಷ್ಮಿ ನರಸಿಂಹ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕಾವೇರಿ ಶಿವಕುಮಾರ್, ಮಾಜಿ ನಗರಸಭಾಧ್ಯಕ್ಷೆ ಚಿನ್ನಮ್ಮ, ಸಿದ್ದರಾಮಯ್ಯ ರಾಮಸಮುದ್ರ, ಜಯರಾಜ್, ಕಾರ್ ಕುಮಾರ್, ನಾರಾಯಣ, ನಾಗೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗಾಯಕರಾದ ಸುರೇಶ್ ನಾಗ್ ಹರದನಹಳ್ಳಿ, ಎಲ್. ಶಿವಲಿಂಗಮೂರ್ತಿ, ರವಿಚಂದ್ರ ಪ್ರಸಾದ್, ಮಹಮ್ಮದ್ ಗೌಸ್, ಕಾವೇರಿ ಶಿವಕುಮಾರ್ ಹಾಗೂ ದೊಡ್ಡ ರಾಯಪೇಟೆ ಮಹಾಲಿಂಗ ಅವರು ಶಂಕರ್ ನಾಗ್ ಅವರ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
