
ಕೊಟ್ಟಿಗೆಹಾರ: ನೆಲಮಂಗಲ ಮೂಲದ ಗೀತಾ ಮಾತಾಜಿ ಅವರು ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಪಾದಯಾತ್ರೆಯ ಮೂಲಕವೇ ವಿವಿಧ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ತೆರಳಿ ದೇವರ ದರ್ಶನ ಪಡೆಯುವ ಅಪರೂಪದ ಧಾರ್ಮಿಕ ವ್ರತವನ್ನು ಮುಂದುವರಿಸಿದ್ದಾರೆ. ಈ ಹಿಂದೆ ಕಾಶಿ, ತಿರುಪತಿ ಸೇರಿದಂತೆ ಹಲವು ಪ್ರಸಿದ್ಧ ತೀರ್ಥಕ್ಷೇತ್ರಗಳಿಗೆ ಕಾಲ್ನಡಿಗೆಯಲ್ಲೇ ತೆರಳಿದ್ದ ಗೀತಾ ಮಾತಾಜಿ, ಈ ವರ್ಷವೂ ಶೃಂಗೇರಿ, ಹೊರನಾಡು, ಕಳಸ, ಧರ್ಮಸ್ಥಳ, ಉಡುಪಿ, ಮುರುಡೇಶ್ವರ ಹಾಗೂ ಗೋಕರ್ಣ ಕ್ಷೇತ್ರಗಳ ದರ್ಶನಕ್ಕಾಗಿ ಪಾದಯಾತ್ರೆ ಕೈಗೊಂಡಿದ್ದಾರೆ. ಇವರ ಈ ಬಾರಿಯ ಪಾದಯಾತ್ರೆಯಲ್ಲಿ ಜೊತೆಯಾಗಿರುವ ಬಾಲಕೃಷ್ಣನ ಮೂರ್ತಿ ವಿಶೇಷ ಆಕರ್ಷಣೆಯಾಗಿದೆ. ಕಿರೀಟ, ಆಭರಣ, ಹೂವಿನ ಹಾರ ಹಾಗೂ ಸಾಂಪ್ರದಾಯಿಕ ಅಲಂಕಾರಗಳಿಂದ ಕಂಗೊಳಿಸುತ್ತಿರುವ ಬಾಲಕೃಷ್ಣನನ್ನು ತಮ್ಮೊಂದಿಗೆ ಕರೆದೊಯ್ಯುತ್ತಿರುವುದು ದಾರಿಯುದ್ದಕ್ಕೂ ಜನರ ಗಮನ ಸೆಳೆಯುತ್ತಿದೆ. ‘ಹೆಜ್ಜೆ ಹೆಜ್ಜೆಯಲ್ಲೂ ಭಕ್ತಿ, ಜೊತೆಯಲ್ಲಿ ಬಾಲಕೃಷ್ಣ’ ಎಂಬಂತೆ ಸಾಗುತ್ತಿರುವ ಗೀತಾ ಮಾತಾಜಿಯ ಧಾರ್ಮಿಕ ಶ್ರದ್ಧೆ ಮತ್ತು ಅಚಲ ನಂಬಿಕೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೊಟ್ಟಿಗೆಹಾರ ಹಾಗೂ ಚಾರ್ಮಾಡಿ ಘಾಟ್ ಮೂಲಕ ಪಾದಯಾತ್ರೆ ಸಾಗಿದ ವೇಳೆ ಸ್ಥಳೀಯರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಶುಭ ಹಾರೈಸಿದರು.




