
ಮೂಡಿಗೆರೆ: ಮೂಡಿಗೆರೆಯಲ್ಲಿ ಮೇ 14ರಂದು ನಡೆಯಲಿರುವ 25ನೇ ವರ್ಷದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಹಿನ್ನಲೆಯಲ್ಲಿ ವಧೂವರರಿಗೆ ಉಡುಗೆ ಹಾಗೂ ಇತರೆ ಪರಿಕರಗಳನ್ನು ವಿತರಿಸಿ ಮಾತನಾಡಿದ ಮಾಜಿ ಸಚಿವೆ ಮೋಟಮ್ಮ, ದುಂದುವೆಚ್ಚ ಮಾಡಿ ಅದ್ದೂರಿಯಾಗಿ ಮದುವೆ ಮಾಡುವುದಕ್ಕಿಂತ ಕಡಿಮೆ ಖರ್ಚಿನಲ್ಲಿ ಸರಳವಾಗಿ ವಿವಾಹ ಕಾರ್ಯ ನಡೆಸಿದರೆ ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಬಡವರು ಕೂಡ ಆಡಂಬರದ ಮದುವೆಗಾಗಿ ಸಾಲ ಮಾಡಿ ಮಕ್ಕಳ ವಿವಾಹ ನೆರವೇರಿಸುತ್ತಿದ್ದ ಪರಿಣಾಮ, ಮದುವೆಯ ಬಳಿಕ ದಂಪತಿಗಳು ಹಾಗೂ ಅವರ ಪೋಷಕರು ಜೀವನಪೂರ್ತಿ ಸಾಲ ತೀರಿಸಲು ದುಡಿಯಬೇಕಾಗುತ್ತಿತ್ತು. ಸುಮಾರು 25 ವರ್ಷಗಳ ಹಿಂದೆ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆರಂಭಿಸಿದ ಬಳಿಕ ಅನೇಕರು ಸರಳವಾಗಿ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿ ಮದುವೆಯಾಗುತ್ತಿರುವುದು ಸಂತಸದ ವಿಚಾರವಾಗಿದ್ದು, ಇದರಿಂದ ಅನಗತ್ಯ ಖರ್ಚು ಹಾಗೂ ಸಾಲದ ಭಾರ ಕಡಿಮೆಯಾಗಿದೆ ಎಂದು ತಿಳಿಸಿದರು. ಸಾಮೂಹಿಕ ವಿವಾಹದ ಮೂಲಕ ದುಂದುವೆಚ್ಚ ತಡೆದು ಸರಳ ಜೀವನಕ್ಕೆ ಆದ್ಯತೆ ನೀಡಬಹುದಾಗಿದೆ ಎಂದ ಅವರು, ಮೇ 14ರಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ 10 ಜೋಡಿಗಳು ಸತಿಪತಿಗಳಾಗಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹೊಸ್ಕೆರೆ ರಮೇಶ್, ಸುಧೀರ್ ಚಕ್ರಮಣಿ, ಬಿ.ಎಂ. ಶಂಕರ್, ದೇವರಾಜ್ ಸಬ್ಲಿ, ಸುರೇಂದ್ರ, ಎಚ್.ಟಿ. ಸುಬ್ರಮಣ್ಯ, ಸಿ.ಬಿ. ಶಂಕರ್, ಕೆ.ಎಲ್. ಸಾಗರ್, ಬಿ.ಇ. ಬಿಳಿಯಪ್ಪ, ಪುಟ್ಟರಾಜ್, ಲೋಕೇಶ್, ರವಿ ಮತ್ತಿತರರು ಉಪಸ್ಥಿತರಿದ್ದರು.





