
ಮೂಡಿಗೆರೆ: ತಾಲ್ಲೂಕಿನ ಬಾಳೂರು ಹೋಬಳಿಯ ಜಾವಳಿ ಕೆಳಗೂರು ಸಂಪ್ಲಿ ಗ್ರಾಮದ ರೈತ ಚಿನ್ನೇಗೌಡ ಅವರ ಮನೆಯ ಬಳಿ ಕಟ್ಟಿಹಾಕಿದ್ದ ಬೇಸಾಯದ ಜೋಡೆತ್ತುಗಳನ್ನು ರಾತ್ರೋರಾತ್ರಿ ದನಕಳ್ಳರು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಚಿನ್ನೇಗೌಡ ಹಾಗೂ ಅವರ ಪುತ್ರ ಅರುಣ್ ಕೆ.ಸಿ. ಬಾಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸುಮಾರು 15 ವರ್ಷಗಳಿಂದ ಬೇಸಾಯದ ಕೆಲಸಕ್ಕಾಗಿ ಸಾಕಿಕೊಂಡಿದ್ದ ಎರಡು ಎತ್ತುಗಳನ್ನು ಮೇಯಲು ಬಿಟ್ಟ ಬಳಿಕ ಸಂಜೆ ಮನೆ ಸಮೀಪದ ಖಾಲಿ ಜಾಗದಲ್ಲಿ ಕಟ್ಟಿಹಾಕಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ದನದ ಕೊಟ್ಟಿಗೆಯ ನೆಲ ಹಾಳಾಗಿದ್ದ ಕಾರಣ ಎರಡು ದಿನಗಳ ಹಿಂದೆ ಸಿಮೆಂಟ್ ಹಾಕಲಾಗಿದ್ದು, ಅದು ಇನ್ನೂ ಗಟ್ಟಿಯಾಗದ ಹಿನ್ನೆಲೆ ಎತ್ತುಗಳನ್ನು ಕೊಟ್ಟಿಗೆಯ ಹೊರಭಾಗದಲ್ಲಿ ಕಟ್ಟಲಾಗಿತ್ತು. ಮೇ 6ರಂದು ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಹುಲ್ಲು ಹಾಕಿ ಮನೆಯೊಳಗೆ ವಿಶ್ರಾಂತಿಗೆ ತೆರಳಿದ್ದ ಕುಟುಂಬದವರು, ಮರುದಿನ ಬೆಳಗ್ಗೆ 5 ಗಂಟೆಗೆ ಎದ್ದು ನೋಡಿದಾಗ ಎತ್ತುಗಳು ಕಾಣೆಯಾಗಿದ್ದವು. ಆರಂಭದಲ್ಲಿ ಹಗ್ಗದ ಸಮೇತ ಎಲ್ಲಾದರು ಹೋಗಿರಬಹುದು ಎಂದು ಭಾವಿಸಿ ಸುತ್ತಮುತ್ತ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದೇ ಇದ್ದ ಹಿನ್ನೆಲೆ, ಮೇ 6ರ ರಾತ್ರಿ 11 ಗಂಟೆಯಿಂದ ಮೇ 7ರ ಬೆಳಗ್ಗೆ 5 ಗಂಟೆಯೊಳಗಿನ ಅವಧಿಯಲ್ಲಿ ಕಳ್ಳರು ಎತ್ತುಗಳನ್ನು ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೇಸಾಯಕ್ಕೆ ಆಸರೆಯಾಗಿದ್ದ ಹಾಗೂ ಅಪಾರ ಪ್ರೀತಿಯಿಂದ ಸಾಕಿದ್ದ ಎತ್ತುಗಳನ್ನು ಕಳೆದುಕೊಂಡಿರುವ ಚಿನ್ನೇಗೌಡರ ಕುಟುಂಬ ತೀವ್ರ ದುಃಖಕ್ಕೀಡಾಗಿದ್ದು, ಮನೆಯ ಅಂಗಳದಲ್ಲಿಯೇ ಕಟ್ಟಿದ್ದ ದನಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ರಾತ್ರಿಹೊತ್ತು ದನಗಳ್ಳರ ಹಾವಳಿ ಹೆಚ್ಚಾಗಿದ್ದು, ಬೀಡಾಡಿ ದನಗಳು ಮಾತ್ರವಲ್ಲದೆ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ದನಗಳನ್ನು ಸಹ ಗೋಹತ್ಯೆ ಉದ್ದೇಶದಿಂದ ಕದ್ದೊಯ್ಯುತ್ತಿರುವ ಘಟನೆಗಳು ಮರುಕಳಿಸುತ್ತಿರುವ ಬಗ್ಗೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಸೂಕ್ತ ತನಿಖೆ ನಡೆಸಿ ಎತ್ತುಗಳನ್ನು ಕದ್ದೊಯ್ದಿರುವ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಚಿನ್ನೇಗೌಡರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





