
ಚಿಕ್ಕಮಗಳೂರು: ಪೊಲೀಸರ ವಿಚಾರಣೆಯ ಬಳಿಕ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡೂರು ತಾಲೂಕಿನ ಬೀರೂರು ಪೊಲೀಸ್ ಠಾಣೆ ವ್ಯಾಪ್ತಿಯ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ನಡೆದಿದೆ. ಚಂದನ್ (20) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಗ್ರಾಮದ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ತೆರಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮೊಬೈಲ್ನಲ್ಲಿ ಚಂದನ್ನ ಮೊಬೈಲ್ ಸಂಖ್ಯೆ ಹಾಗೂ ಸಂಪರ್ಕದ ಮಾಹಿತಿ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ನಿಯಮಿತ ವಿಚಾರಣೆಗೆ ಕರೆದಿದ್ದರು. ವಿಚಾರಣೆ ನಡೆಸಿದ ಬಳಿಕ ಬೀರೂರು ಪೊಲೀಸರು ಚಂದನ್ನನ್ನು ನಿನ್ನೆ ಸಂಜೆ ಮನೆಗೆ ಕಳುಹಿಸಿದ್ದರು. ಆದರೆ ಮನೆಗೆ ತೆರಳಿದ ಬಳಿಕ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಯುವತಿ ಮನೆ ಬಿಟ್ಟು ಹೋಗಲು ಚಂದನ್ ಕಾರಣ ಎಂಬ ರೀತಿಯಲ್ಲಿ ಗ್ರಾಮದಲ್ಲಿ ಮಾತುಗಳು ಹರಿದಾಡಿದ್ದರಿಂದ ಆತ ಮನನೊಂದು ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆತ್ಮಹತ್ಯೆಗೂ ಮುನ್ನ ಚಂದನ್ ತನ್ನ ತಾಯಿಗೆ ಸಂದೇಶ ಕಳುಹಿಸಿದ್ದಾನೆ ಎನ್ನಲಾಗಿದೆ. ಆದರೆ ಚಂದನ್ ಆತ್ಮಹತ್ಯೆಗೆ ಪೊಲೀಸ್ ವಿಚಾರಣೆಯೇ ಕಾರಣವೋ ಅಥವಾ ಬೇರೆ ಯಾವುದಾದರೂ ಕಾರಣವಿದೆಯೋ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದ್ದು, ಪ್ರಕರಣದ ನಿಖರ ಸತ್ಯಾಂಶ ತನಿಖೆಯಿಂದ ಹೊರಬರಬೇಕಿದೆ. ಈ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.



