
ಒಬ್ಬೊಬ್ಬೊರು ಒಂದೊಂದು ರೀತಿಯಲ್ಲಿ ಆಕೆಯನ್ನು ಕನ್ವಿನ್ಸ್ ಮಾಡುತ್ತಿದ್ದರು. ಊಹುಂ… ಅದು ಕನ್ವಿನ್ಸ್ ಅಲ್ಲ ಅದೊಂಥರ ಒತ್ತಡ. ಇವರ ಅಭಿಪ್ರಾಯಕ್ಕೆ ಅವಳ ಸಮ್ಮತಿ ಬೇಕಿತ್ತು. ಅದಕ್ಕಾಗಿ ಅವಳ ಸುತ್ತ ನೆರೆದವರು ತಮ್ಮದೇ ರೀತಿಯಲ್ಲಿ ಅವಳ ಮೇಲೆ ಮಾತಿನ ದಾಳಿ ನಡೆಸುತ್ತಿದ್ದರು. ಇಂತಹ ಸನ್ನಿವೇಶಗಳಲ್ಲಿ ಬಹುಶಃ ನಾವು ಒಂದು ತಪ್ಪು ಹೆಜ್ಜೆಯನ್ನು ಅನಿವಾರ್ಯವಾಗಿ ಇಟ್ಟು ಬಿಡುತ್ತೇವೆ! ನಾಲ್ಕು ಜನರು ಹೇಳಿದ ಮಾತಿಗೆ ಸಮ್ಮತಿ ಸೂಚಿಸಿ ಬಿಡುವುದು. ನಮಗಿಷ್ಟ ಇಲ್ಲದಿದ್ದರೂ ಒಪ್ಪಿಕೊಳ್ಳುವುದಿದೆಯಲ್ಲ ಅದು ಮುಂದೆ ಕೆಟ್ಟ ಪರಿಣಾಮ ಬೀರುತ್ತದೆ. ಕೆಲವು ಸಲ ನಾವು ಯಾರದೋ ಎಮೋಶನಲ್ ಬ್ಲಾಕ್ಮೇಲ್ಗೆ ಒಳಗಾಗಿ ಬಿಡುತ್ತೇವೆ. ಇಲ್ಲವಾದರೆ ಇಲ್ಲಿಂದ ತಪ್ಪಿಸಿಕೊಂಡರೆ ಸಾಕು ಎಂದುಕೊಂಡು ಯಾವುದೋ ಸಂಗತಿಗಳಿಗೆ ನಮ್ಮ ಒಪ್ಪಿಗೆ ಸೂಚಿಸಿ ಬಿಡುತ್ತೇವೆ. ಒಬ್ಬ ಹುಡುಗ ಏಕಾಂತದಲ್ಲಿ ಸಿಕ್ಕ ಹುಡುಗಿಯನ್ನು ಭಾವನಾತ್ಮಕವಾಗಿ ಬಂಧನದಲ್ಲಿಟ್ಟುಕೊಂಡು ಅಪ್ರೋಚ್ ಮಾಡುತ್ತಾನಲ್ಲ. ಹುಡುಗಿಗದು ಉಭಯ ಸಂಕಟ. ಏನು ಮಾಡಬೇಕೆಂದು ತೋಚುವುದೇ ಇಲ್ಲ. ಆಕೆ ಅನಿವಾರ್ಯವಾಗಿ ಎಸ್ ಎಂದು ಬಿಡುತ್ತಾಳೆ. ಫಿನಿಶ್! ಅಲ್ಲಿಂದ ಮುಂದೆ ಆಗುವ ಎಲ್ಲಾ ಆಗುಹೋಗುಗಳಿಗೂ ಅವಳ ಆ ಕ್ಷಣದ ನಿರ್ಧಾರವೇ ಕಾರಣವಾಗಿರುತ್ತದೆ. ಇದು ಕೇವಲ ಇಂತಹ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವುದಿಲ್ಲ. ವ್ಯವಹಾರ, ವ್ಯಾಪಾರ, ಮದುವೆ, ಉದ್ಯೋಗ ಹೀಗೆ ನಾನಾ ಕ್ಷೇತ್ರಗಳಲ್ಲಿ ನಾವು ತೆಗೆದುಕೊಂಡ ತಪ್ಪು ನಿರ್ಧಾರಗಳು ಮುಂದೆ ನಾವು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿರುತ್ತದೆ. ಆತ ನಿಮ್ಮ ಆತ್ಮೀಯ ಗೆಳೆಯ. ಆದರೆ ಅವನಿಗೆ ವ್ಯವಹಾರ ಜ್ಞಾನ ಇಲ್ಲ. ಮೇಲಾಗಿ ಸೋಮಾರಿ, ಜೊತೆಗೆ ಬೇಜವಾಬ್ದಾರಿತನವೂ ಆತನಿಗೆ ಅಂಟಿಕೊಂಡಿದೆ. ಇದ್ದಕ್ಕಿದ್ದಂತೆ ಆತ ಹೊಸದೊಂದು ವ್ಯವಹಾರ ಶುರುಮಾಡಲು ಉತ್ಸುಕನಾಗುತ್ತಾನೆ. ಅದಕ್ಕೆ ಸಂಬಂಧಿಸಿದಂತೆ ಆತನ ತಯಾರಿಯೂ ಭರ್ಜರಿಯಾಗಿಯೇ ನಡೆದಿರುತ್ತದೆ. ಬ್ಯಾಂಕಿನಲ್ಲಿ ಸಾಲ ಮಾಡಲು ಮುಂದಾಗಿರುತ್ತಾನೆ. ಜಾಮೀನಿಗೆ ನೀವೇ ಕ್ಯಾಂಡಿಡೇಟು! ಹಾಗಂತ ಅವನು ನಿರ್ಧರಿಸಿಬಿಟ್ಟಿದ್ದಾನೆ. ಈಗ ನಿಮ್ಮದು ಧರ್ಮ ಸಂಕಟ. ಆತ ನಿಮ್ಮ ಬೆಸ್ಟ್ ಫ್ರೆಂಡ್. ಹಾಗಂತ ನೀವು ಜಾಮೀನು ಹಾಕಿದಿರೋ ಅದು ನಿಮ್ಮ ತಲೆಗೆ ಸುತ್ತಿಕೊಳ್ಳೋದು ಗ್ಯಾರಂಟಿ. ಇಲ್ಲಿ ನಿಮಗೆ ಗೊತ್ತಿದ್ದೂ ನೀವು ಒಪ್ಪಿಕೊಳ್ಳೋದಿದೆಯಲ್ಲ. ಅದೇ ನಾನು ಹೇಳಿದ್ದು. ಯಾವುದೋ ಸಂಕೋಚ, ಒತ್ತಡ, ಸೆಂಟಿಮೆಂಟುಗಳಿಗೆ ಕಟ್ಟುಬಿದ್ದು ನಾವಿಡೋ ತಪ್ಪು ಹೆಜ್ಜೆ ಅಂತ. ನಾನು ಆಗ ಹೇಳ್ತಾ ಇದ್ದಿದ್ದು ಇದೇ ತರಹದ ಒಂದು ಸಂದಿಗ್ಧ್ದತೆಯಲ್ಲಿ ಸಿಲುಕಿಕೊಂಡಿದ್ದ ಹುಡುಗಿಯದ್ದು. ಆಕೆಗೆ ಆ ಹುಡುಗ ಇಷ್ಟವಿಲ್ಲ. ಆದರೆ ಮನೆಯವರ ದೃಷ್ಠಿಯಲ್ಲಿ ಅದು ಒಳ್ಳೆ ಸಂಬಂಧ. ಅದು ನಮಗೆ ಸಿಕ್ಕದ್ದೇ ಪುಣ್ಯ ಎಂಬಂತೆ ಮಾತಾಡುತ್ತಾರೆ. ಅವಳನ್ನು ಒಪ್ಪಿಸಲು ಇಡೀ ಕುಟುಂಬವೇ ಒಂದಾಗಿ ಅವಳೆದುರು ನಿಂತಿದೆ. ಏನಾದರೂ ಆಗಲಿ ಅಂತ ಒಪ್ಪಿಕೊಂಡೇಬಿಟ್ಟಳು. ಹಾಗೆ ಒಪ್ಪಿಕೊಳ್ಳುವುದು ಸಾಮಾನ್ಯ ಮಾತಲ್ಲ. ಆ ಒಪ್ಪಿಗೆಯೊಂದಿಗೆ ನಿಮ್ಮ ಭಾವನೆ, ಕನಸು, ಆಸೆ, ಕೆಲವೊಮ್ಮೆ ನಿಮ್ಮ ತನವನ್ನು ನೀವು ಬಲಿ ಕೊಡಬೇಕಾಗುತ್ತದೆ. ಮುಂದೆ ಅವಳು ಮದುವೆಯಾಗಿ ಸಂಸಾರದಲ್ಲಿ ಬಿರುಕು ಮೂಡಿದಾಗ ಛೇ ನಾನವತ್ತು ಒಪ್ಪಿಕೊಳ್ಳಬಾರದಿತ್ತು ಎಂದೆನಿಸುತ್ತದೆ. ತಮಾಷೆ ಸಂಗತಿ ಎಂದರೆ ಅವಳನ್ನು ಕನ್ವಿನ್ಸ್ ಮಾಡಿದ ಯಾರೊಬ್ಬರೂ ಅವಳ ಇವತ್ತಿನ ಪಶ್ಚಾತ್ತಾಪಕ್ಕೆ, ಸಂಕಟಕ್ಕೆ, ನೋವಿಗೆ ಬರುವುದಿಲ್ಲ. ಬಂದರೂ ಮತ್ತೆ ಅವಳನ್ನೇ ಕನ್ವಿನ್ಸ್ ಮಾಡುತ್ತಾರೆ. ಹೊಂದಿಕೊಂಡು ಹೋಗು ಅನ್ನೋ ಬಿಟ್ಟಿ ಸಲಹೆ ಮಾತ್ರ ನೀವು ಅವರಿಂದ ನಿರೀಕ್ಷಿಸಬಹುದು. ಅದಕ್ಕೆ ನಾವು ಪ್ರತಿಯೊಂದು ಬಾರಿಯೂ ಒಂದು ನಿರ್ಧಾರಕ್ಕೆ ಬರುವ ಮೊದಲು ಸಾವಿರ ಸಲ ಯೋಚಿಸಬೇಕು. ಅದಕ್ಕಿಂತ ಮುಖ್ಯವಾಗಿ ನಾವು ತೆಗೆದುಕೊಳ್ಳುವ ನಿರ್ಧಾರ ನಮ್ಮ ಸ್ವಂತದ್ದಾಗಿರಬೇಕು ಮತ್ತು ನಮ್ಮ ಆತ್ಮಸಾಕ್ಷಿಗೆ ಅದು ಸಮ್ಮತವಾಗಿರಬೇಕು. ಕೊನೆಯದಾಗಿ, ಈ ಕ್ಷಣಕ್ಕೆ ನಾನು ಯಾವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಅಂತ ನಿರ್ಧರಿಸುವುದು ಕೆಲವು ಸಲ ಉತ್ತಮ ನಿರ್ಧಾರವಾಗಿರುತ್ತದೆ! ಅಲ್ವಾ?




