
ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರುಎಣಿಕೆಯಲ್ಲಿ ಬಿಜೆಪಿಗೆ ಗೆಲುವು ದೊರೆತ ಹಿನ್ನೆಲೆ ರಾಜಕೀಯ ತೀವ್ರತೆ ಹೆಚ್ಚಾಗಿದ್ದು, ಮತಚೋರಿ ಆರೋಪ ಮಾಡಿರುವ ಕಾಂಗ್ರೆಸ್ ಮುಖಂಡರು ಇದೀಗ ದೇವರ ಮೊರೆ ಹೋಗಿದ್ದಾರೆ. ಮಾಜಿ ಶಾಸಕ ಟಿ.ಡಿ. ರಾಜೇಗೌಡರ ನೇತೃತ್ವದಲ್ಲಿ ಕೊಪ್ಪದ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಸಂಕಲ್ಪ ಪೂಜೆ ನೆರವೇರಿಸಿ, ಕಾಂಗ್ರೆಸ್ ಅಥವಾ ಬಿಜೆಪಿ ಯಾರೇ ಮತಚೋರಿ ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಮೂರೂ ಧಾರ್ಮಿಕ ಕೇಂದ್ರಗಳಲ್ಲೂ ಸಂಕಲ್ಪ ಮಾಡುವುದಾಗಿ ರಾಜೇಗೌಡ ತಿಳಿಸಿದ್ದಾರೆ, ಜೊತೆಗೆ ಗಬ್ಬಾನೆ ಬೂತರಾಯನ ದೇಗುಲದಲ್ಲೂ ಪೂಜೆ ಸಲ್ಲಿಸಲು ಕೈ ಕಾರ್ಯಕರ್ತರು ನಿರ್ಧರಿಸಿದ್ದಾರೆ. ಕಾರ್ಯಕ್ರಮದಲ್ಲಿ ಮುಖಂಡರಾದ ರವಿಶಂಕರ್, ಸುಧೀರ್ ಕುಮಾರ್ ಮುರೋಳ್ಳಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು. 2023ರ ಚುನಾವಣೆಯಲ್ಲಿ 201 ಮತಗಳ ಅಂತರದಿಂದ ಜಯಗಳಿಸಿದ್ದ ರಾಜೇಗೌಡ, 2026ರ ಮರುಎಣಿಕೆಯಲ್ಲಿ 52 ಮತಗಳ ಅಂತರದಿಂದ ಸೋತಿದ್ದು, 2023ರಲ್ಲಿ ಮಾನ್ಯವಾಗಿದ್ದ 255 ಅಂಚೆ ಮತಗಳು 2026ರಲ್ಲಿ ಏಕಾಏಕಿ ಅಮಾನ್ಯವಾಗುವುದು ಹೇಗೆ ಸಾಧ್ಯ ಎಂದು ಪ್ರಶ್ನೆ ಎತ್ತಿದ್ದಾರೆ. ಈ ಸಂಬಂಧ ಈಗಾಗಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಅವರು, ಕಾನೂನಿನ ಮುಂದೆ ಹೋರಾಟ ನಡೆಸುವುದರ ಜೊತೆಗೆ ದೇವರ ಮುಂದೆ ಸಂಕಲ್ಪ ಕೂಡ ಮಾಡಿದ್ದಾರೆ. ಇತ್ತ ನಿನ್ನೆ 2023ರ ಮತ ಎಣಿಕೆ ಪಾರದರ್ಶಕವಾಗಿತ್ತು ಎಂದು ಬಿಜೆಪಿ ಏಜೆಂಟ್ಗಳು ಸಹ ಪೂಜೆ ಸಲ್ಲಿಸಿದ್ದರಿಂದ ಶೃಂಗೇರಿ ಕ್ಷೇತ್ರದ ರಾಜಕೀಯ ಮತ್ತಷ್ಟು ಕುತೂಹಲ ಕೆರಳಿಸಿದೆ.




