
ಇತ್ತೀಚೆಗೆ ರೈಲಿನಲ್ಲಿ ಪರಿಚಯವಾದ ಹುಡುಗಿಯೊಬ್ಬಳು ನನ್ನ ಕೈಯಲ್ಲಿದ್ದ ಯಂಡಮೂರಿಯವರ ಪುಸ್ತಕ ಇಸಿದುಕೊಂಡು ಒಂದೆರಡು ಪುಟ ತಿರುವಿ ಹಾಕಿ (ಓದಿದ್ದಲ್ಲ!) ನನಗೆ ವಾಪಾಸ್ ಕೊಟ್ಟಳು. ಏನ್ ಗೊತ್ತಾ ರೀ ನಂಗೆ ಕನ್ನಡ ಅಷ್ಟಾಗಿ ಓದೋಕೆ ಬರಲ್ಲ ಬಟ್ ಓದ್ಬೇಕು ಅಂದ್ಕೊತೀನಿ, ನಾವೆಲ್ ಎಲ್ಲಾ ಚೆನ್ನಾಗಿರುತ್ತೆ ಅಲ್ವಾ? ಎಂದಳು.
ಆಗ ನಾನು ಆಶ್ಚರ್ಯದಿಂದ ಆಕೆಯನ್ನು ಕೇಳಿದೆ. ಮೇಡಂ ನಿಮ್ದು ಯಾವ ಊರು?
ನಮ್ದು ಹೊಳೆಹೊನ್ನೂರು ಅಂತ ಹರಿಹರ ಶಿವಮೊಗ್ಗ ಮದ್ಯೆ ಬರುತ್ತೆ ಬಟ್ ನಾನು ಬೆಂಗಳೂರಲ್ಲಿ ಇರೋದು ಅಂದಳು.
ನೀವು ಓದಿದ್ದು…? ನಾನು ಕೇಳಿದೆ.
ಡಿಗ್ರಿ ಹರಿಹರದಲ್ಲಿ ಮಾಡಿದ್ದು ಬಿ.ಎ ಮಾಡಿದೀನಿ ಈಗ ಬೆಂಗಳೂರಲ್ಲಿ ಒಂದು ಕಂಪನೀಲಿ ಕೆಲ್ಸ ಮಾಡ್ತಾ ಇದೀನಿ ಅಂದಳು.
ನೋಡಿ ಇದನ್ನೆ ನಾನು ಹೇಳಿದ್ದು ಓದಿದ್ದು ಬಿ.ಎ ಇರೋದು ಕರ್ನಾಟಕದಲ್ಲಿ ಆದರೆ ಕನ್ನಡ ಓದೋಕೆ ಬರಲ್ಲ ಅಂತಾಳೆ. ಹೀಗೆ ಹೇಳೋರು ನಿಮ್ಗೂ ಸಿಕ್ಕಿರಬಹುದು. ಹಾಗಂತ ಹೇಳುವವರನ್ನು ಕೇಳಿ ಇಂಗ್ಲೀಷ್ನ ಯಾವ ಕಾದಂಬರಿ ಓದಿದ್ದೀರಿ ಅಂತ? ಊಹುಂ ಅವರು ಯಾವ ಸಾಹಿತ್ಯವನ್ನು ಓದಿರುವುದಿಲ್ಲ. ನಂಗೆ ಕನ್ನಡ ಓದೋಕೆ ಕಷ್ಟ ಅನ್ನೋದು ಫ್ಯಾಷನ್ ಎಂದುಕೊಂಡಿರುತ್ತಾರೆ. ನಾವು ಡವ್ ಮಾಡೋದು ಅಂತೀವಲ್ಲ ಹಾಗೆ. ಕನ್ನಡ ನಾಡಿನಲ್ಲಿರುವವರಿಗೆ ಮಾತೃಭಾಷೆಯೇ ಓದೋಕೆ ಬರಲ್ಲ ಅಂದ್ರೆ ಅದೆಂಥಹ ನಾಚಿಕೆಗೇಡಿನ ಸಂಗತಿ. ಬಿಡಿ ಇದು ಕೇವಲ ಓದಿಗೆ ಸಂಬಂಧಿಸಿದ್ದಲ್ಲ ನಂಗೆ ಕನ್ನಡ ಸಿನಿಮಾ ಅಂದ್ರೆ ಆಗಲ್ಲ. ನಾನು ನೋಡೋದೇ ಇಲ್ಲ… ಅಂತ ಹೇಳುವವರು ಇದ್ದಾರೆ. ಒಬ್ಬ ಹುಡುಗಿ ನಾನು ಡೈಲಿ ಏಳೋದು ಎಂಟು ಗಂಟೆಗೆ, ಅಮ್ಮ ತಿಂಡಿ ರೆಡಿ ಮಾಡಿ ಕರೆದ್ರೂ ನಂಗೆ ಏಳೋಕೆ ಮನಸ್ಸಾಗಲಿಲ್ಲ… ಅಂದ್ರೆ ಅದು ಹೆಮ್ಮೆಯ ಸಂಗತಿಯಾ? ಹುಡ್ಗೀರು ಮಾತ್ರವಲ್ಲ ಹುಡುಗರು ಕೂಡ ಆಗಾಗ ಹೇಳೋದುಂಟು. ನಾನು ಮನೆಯಲ್ಲಿ ಮಲಗಿದ ಹಾಸಿಗೆ ಎತ್ತಿಡಲ್ಲ. ಊಟ ಮಾಡಿದ ತಟ್ಟೇನ ತಂಗಿ, ಅಮ್ಮ ತೊಳಿತ್ತಾರೆ…. ಇದನ್ನೆಲ್ಲ ಅದೇನೋ ಹೆಮ್ಮೆಯ ಸಂಗತಿ ಅನ್ನೋ ರೀತಿ ಹೇಳ್ತಾರೆ. ತಿಂದ ತಟ್ಟೆ ತೊಳೆಯದವನನ್ನು ನಾವು ಸೂಪರ್ ಮ್ಯಾನ್ ಅಂದ್ಕೊಂಡಿದ್ದೀವಾ…? ಅದೇಕೆ ಕೆಲವರು ಹಾಗಂದುಕೊಳ್ಳುತ್ತಾರೋ ಗೊತ್ತಿಲ್ಲ. ನಮ್ಮಲ್ಲಿ ಕೆಲ ಹುಡುಗ ಹುಡುಗಿಯರಿಗೆ ಹಳ್ಳಿಯಲ್ಲಿರೋ, ಅಲ್ಲಿಯ ಜನ ಜೀವನಕ್ಕೆ ಒಗ್ಗಿಕೊಂಡಿರೋ ಅವರ ತಂದೆ ತಾಯಿ, ಅಜ್ಜಿ ಅಜ್ಜರೊಡನೆ ಹೊರಗೆಲ್ಲೊ ಸುತ್ತಾಡುವುದನ್ನು ಕೂಡ ಅವಮಾನವೆಂದು ಭಾವಿಸುತ್ತಾರೆ! ಇವರು ಇಂದು ಬೆಂಗಳೂರಿನಂತಹ ದೊಡ್ಡ ಸಿಟಿಯಲ್ಲಿ ಕೈತುಂಬ ಸಂಬಳ ಪಡೆಯುವ ನೌಕರರು. ಆ ಜೀವನ ಶೈಲಿಯಲ್ಲಿ ಬದುಕಲು ಹೊರಟ ಇವರಿಗೆ ಹಳ್ಳಿಯ ತಂದೆ ತಾಯಿಗಳೊಂದಿಗೆ ಸುತ್ತಾಡುವುದು ಅವಮಾನಕರ ಎನಿಸುತ್ತದೆ. ಆದರೆ ನೆನಪಿಡಿ ಈ ಹಳ್ಳಿಯಿಂದ ಮೊಟ್ಟ ಮೊದಲು ನೀವು ಬೆಂಗಳೂರಿಗೆ ಹೊರಟ ದಿನ ಬಸ್ ನಿಲ್ದಾಣದಲ್ಲಿ ನಿಮ್ಮ ತಂದೆ ಲುಂಗಿ ಎತ್ತಿ ಪಟಾಪಟ್ಟಿ ಚಡ್ಡಿಯ ಜೇಬಿನೊಳಗಿಂದ 500ರೂ ಕೊಟ್ಟು ಇಟ್ಕೊಂಡಿರು ಅಂತಾರಲ್ಲ. ಆಗ ನಿಮಗೆ ಅದು ನಿಮಗೆ ಅಪ್ಪಂಗೆ ಮ್ಯಾನರ್ಸ್ ಇಲ್ಲ ಅಂತ ಅನಿಸಿಲ್ಲ ಅಲ್ವಾ? ನಾನು ಸಾಕಷ್ಟು ಊರುಗಳಲ್ಲಿ ಸುತ್ತಿದ್ದೇನೆ. ಪ್ರೆಸ್ ಮೀಟು, ಪಾರ್ಟಿ, ಮೀಟಿಂಗ್, ಮದುವೆ ಹೀಗೆ ಸಾಕಷ್ಟು ಓಡಾಟ ಮಾಡುತ್ತಿರುತ್ತೇನೆ. ಕೆಲವು ಕಡೆಗಳಲ್ಲಿ ಸಂದರ್ಭಕ್ಕೆ ತಕ್ಕಂತೆ ನಮ್ಮ ವೇಷ ಭೂಷಣಗಳಲ್ಲಿ, ಬಾಡಿ ಲಗ್ವೇಂಜ್ನ್ನು ಬದಲಿಸಿಕೊಳ್ಳಬೇಕು, ಒಪ್ಪಿಕೊಳ್ಳುತ್ತೇನೆ ಆದರೆ ಬದಲಾವಣೆ ಅನ್ನೋದು ವೇಷಭೂಷಣ ನಡವಳಿಕೆಯಲ್ಲಿ ಆಗಬೇಕೇ ಹೊರತು ನಮ್ಮತನ ಅಂತ ಇರುತ್ತಲ್ಲ ಅದಾಗಬಾರದು. ನಿಮ್ಗೆ ಗೊತ್ತಲ್ಲ ನಮ್ಮ ಮಣ್ಣು, ಭಾಷೆ, ಸಂಬಂಧಗಳು ಇವುಗಳ ಮೇಲೆ ತಾತ್ಸಾರ ಬೆಳೆಸಿಕೊಂಡರೆ ಅದು ನಮ್ಮ ಸ್ಟೇಟಸ್ ಆಗುವುದಿಲ್ಲ. ನಂಗೆ ಕನ್ನಡ ಓದೋಕೆ ಬರಲ್ಲ ಅಂತ ಬಿಲ್ಡಪ್ ಕೊಡೋಕೆ ಹೋಗಿ ನಿಮ್ಮ ಎದುರಿನವರ ಮುಂದೆ ತೀರ ಕೇವಲ ಅಂತ ಅನಿಸಿಕೊಳ್ಳಬೇಡಿ. ಒಂದ್ಸಲ ಯೋಚನೆ ಮಾಡಿ ನಾನು ಹೇಳಿದ್ದು ತಪ್ಪಾ?




