
Good bye..!
ಇದೊಂದು ಪದವನ್ನ ಹುಡುಗಿಯರಿಗಾಗಿಯೇ ಸೃಷ್ಠಿಸಿರಬೇಕು. ಅದೊಂದು ಶಬ್ದ ಹುಡುಗರ ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿಬಲ್ಲದು! ಹೌದು ತುಂಬಾ ಪ್ರೀತಿಸಿದ, ವರ್ಷಗಟ್ಟಲೆ ಜೊತೆಗಿದ್ದ ಹುಡುಗಿಯೊಬ್ಬಳು ಇದ್ದಕ್ಕಿದ್ದಂತೆ ಯಾವ ಮುನ್ಸೂಚನೆಯನ್ನೂ ನೀಡದೆ Good bye ಅಂತ ಹೇಳಿ ಹೋಗುತ್ತಾಳಲ್ಲ. ಕೊಂಚ ಭಾವುಕ ಮನಸ್ಸಿನ ಹುಡುಗರಿಗೆ ನಿಂತ ನೆಲವೇ ಕುಸಿದು ಬಿಡುತ್ತದೆ, ಬದುಕು ಸಾಕು ಎನಿಸುತ್ತದೆ, ಹತಾಶೆ, ಆಕ್ರೋಶ ಎಲ್ಲವೂ ಆವರಿಸಿಕೊಂಡು ಬಿಡುತ್ತದೆ. ಆಶ್ಚರ್ಯವಾಗೋದು ಎಂದರೆ ಯಾವುದಕ್ಕೂ ಕರಗದ, ಕ್ರೂರಿ ಎನಿಸಿಕೊಂಡ ವ್ಯಕ್ತಿಗೂ ಕೂಡ ಈ ಸನ್ನಿವೇಶ ಬಂದಾಗ ಅಧೀರನಾಗುತ್ತಾನೆ. ಆದರೆ ತುಂಬಾ ಸಲ ಹಾಗೆ Good bye ಹೇಳಿದ ಹುಡುಗಿಯ ಬಗ್ಗೆ ಹುಡುಗರು ಇದ್ದಕ್ಕಿದ್ದಂತೆ ಸೇಡು ತೀರಿಸಿಕೊಳ್ಳೋ ತೀರ್ಮಾನಕ್ಕೆ ಕೈ ಹಾಕುತ್ತಾರೆ. ಅವಳು ಕಳಿಸಿರೋ ಮೇಸೇಜ್ನ್ನು, ಅವಳೊಂದಿಗೆ ತೆಗೆಸಿದ ಫೋಟೋ ಎಲ್ಲವನ್ನು ನಿಮ್ಮ ಮತ್ತು ಆಕೆಯ ಪರಿಚಯಸ್ಥರ ಮುಂದೆ ತೋರಿಸಿ ಸಿಂಪತಿ ಗಳಿಸೋ ಪ್ರಯತ್ನದ ಜೊತೆಗೆ ಆ ಹುಡುಗಿಯ ವಿರುದ್ದ ಸೇಡು ತೀರಿಸಿಕೊಳ್ಳೋ ಪ್ರಯತ್ನವಿದು. ಡಿಯರ್ ಬಾಯ್ಸ್, ಪ್ಲೀಸ್ ಡೋಂಟ್ ಮೂವ್! ಆವೇಶಕ್ಕೆ ಬಿದ್ದು ಅಂತಹ ಕೆಲಸಕ್ಕೆ ಕೈ ಹಾಕಬೇಡಿ. ಜೊತೆಗಿದ್ದಷ್ಟು ದಿನವು ಆ ಹುಡುಗಿ ನಿಮ್ಮನ್ನು ಸಂತೋಷವಾಗಿರಿಸಿದ್ಲು ತಾನೆ. ಕೊಂಚ ಯೋಚ್ನೆ ಮಾಡಿ, ಇವತ್ತು ನಿಮ್ಮನ್ನು ಅವಳು ದೂರ ಮಾಡಿರಬಹುದು. ಆಫ್ ಕೋರ್ಸ್ ನಿಮ್ಗೆ ಹರ್ಟ್ ಆಗಿದೆ. ಆದರೆ ಇಬ್ಬರು ಒಟ್ಟಿಗಿದ್ದ ಕಾಲದಲ್ಲಿ ನಿಮ್ಮಿಂದ ಅವಳಿಗೆ ಎಷ್ಟು ಹರ್ಟ್ ಆಗಿರಬಹುದು. ನೀವೇನು ಸ್ಪಲ್ಪ ಕಾಡಿದ್ದೀರಾ..? ಅದೆಷ್ಟು ಬಾರಿ ಆಕೆ ಕಣ್ಣೀರಿಟ್ಟಿರಬಹುದು… ಪ್ರತಿ ಬಾರಿಯೂ ಅವಳಾಗಿಯೇ ಹೊಂದಿಕೊಳ್ಳುತ್ತಿರಲಿಲ್ಲವೇ… ನಿಮ್ಮದು ಅದೆಂಥದೋ ಹಟ, ಬಿಗುಮಾನ… ಅದೆಲ್ಲವನ್ನೂ ಆಕೆ ಸಹಿಸಿಕೊಂಡಳೇ ಹೊರತು ನಿಮ್ಮನ್ನು ಶಿಕ್ಷಿಸಲಿಲ್ಲ, ಕೊನೆ ಪಕ್ಷ ನಿಮ್ಮ ಮನಸ್ಸಿಗೆ ನೋವು ಕೊಡಲಿಲ್ಲ. ಕಷ್ಟಪಟ್ಟಾದರೂ ನಿಮ್ಮ ಜೊತೆ ಇದ್ದಳು ಅಲ್ವಾ? ಇದ್ಲು ನಿಜ, ಆದ್ರೆ ಹೀಗೆ ಬಿಟ್ಟು ಹೋಗಿರೋದ್ಯಾಕೆ ಅಂತ ತಾನೆ ನಿಮ್ಮ ಕಂಪ್ಲೆಂಟು. Cool, ಗೆಳೆಯರೇ ನೀವು ಆಕೆಯ ಮೇಲಿಟ್ಟಿರೋ ಪ್ರೀತಿ ನಿಜವಾಗಿದ್ದೇ ಹೌದಾದರೆ ಖಂಡಿತಾ ಹುಡುಗಿ ಸರಿ ಹೋಗುತ್ತಾಳೆ. ಪ್ರಾಮಾಣಿಕ ನಿರೀಕ್ಷೆ ಎಂದಿಗೂ ಸುಳ್ಳಾಗುವುದಿಲ್ಲ. ಹೊರಡುವಾಗ ತುಂಬಾ ಕಠೋರವಾಗಿ ಮಾತಾಡಿದ್ಲು, ಅಷ್ಟು ದಿನ ಜೊತೆಗಿದ್ದಿದೇ ಸುಳ್ಳೇನೋ… ಎಂಬಂತೆ ಮಾತಾಡಿರುತ್ತಾರೆ ಹುಡ್ಗೀರು! ಅದು ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಆಡಿರೋ ಮಾತುಗಳು. ಅವರಿಗೂ ಭಾವನೆಗಳಿರುತ್ತೆ ಅಲ್ವಾ! ಪ್ಲೀಸ್ ವೇಯ್ಟ್. ನಾವೆಲ್ಲ ಪೂಜಿಸೋ ಭೂತಾಯಿ, ಕ್ಷಮಾಯಾಧರಿತ್ರಿ ಅಂತ ಕರಿಯೋ ಭೂಮಿ ಕೂಡ ಒಮ್ಮೊಮ್ಮೆ ಆಕ್ರೋಶಗೊಂಡು ಭೂಕಂಪ ಆಗುತ್ತೆ ಅಲ್ವಾ..? ಹಾಗೇನೆ ಹುಡ್ಗಿ ಕೂಡ. ಅದೆಷ್ಟೋ ದಿನಗಳಿಂದ ಹತ್ತಿಕ್ಕಿಕೊಂಡ ದುಃಖ, ಕೋಪ, ಆಕ್ರೋಶ ಸ್ಪೋಟಗೊಂಡಿದೆ! ಅವಳನ್ನ ಅವಳ ಪಾಡಿಗೆ ಬಿಟ್ಟು ಬಿಡಿ, ಕೊಂಚ ಸಮಯ ಬೇಕು. ಮನಸ್ಸು ತಿಳಿಯಾಗುತ್ತೆ. ಗೆಳೆಯ, ಅವಸರ ಬೇಡ ಗುಡ್ ಬೈ ಅಂತ ಹೇಳಿದವಳು ನಾಳೆ ಹಾಯ್ ಹೇಳುತ್ತಾಳೆ! ಅಲ್ಲಿಯವರೆಗೂ ನೀನು ಗುಡ್ ಬಾಯ್ ಆಗಿರಬೇಕು. ನೀನು ಪ್ರೀತಿಸಿದ ಹುಡುಗಿ ಹೆಣ್ಣು! ಅಂದ್ರೆ ವಾತ್ಸಲ್ಯಮಯಿ, ಆಕೆಯದು ಮಾತೃ ಹೃದಯ! ನಿನ್ನ ನೋವು ಅವಳಿಗೆ ಅರ್ಥವಾಗುತ್ತೆ. ಅವಳೇ ಸಂತೈಸುತ್ತಾಳೆ. ಪ್ರಾಮಾಣಿಕ ಪ್ರೀತಿಯಲ್ಲಿ ಅಷ್ಟೇ ಪ್ರಾಮಾಣಿಕ ನಿರೀಕ್ಷೆ ಇರುತ್ತೆ ಮತ್ತು ಅದು ಹುಡುಗಿಯರಿಗೆ ಅರ್ಥವಾಗುತ್ತೆ.




