
ಕೊಟ್ಟಿಗೆಹಾರ: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಪ್ರವಾಸಿಗರಲ್ಲಿ ಆತಂಕ ಮೂಡಿಸಿದ್ದು, ಮಳೆಗಾಲದ ಹಿನ್ನೆಲೆ ಹಾಗೂ ಕಡಿಮೆಯಾದ ದೃಶ್ಯತೆಯಿಂದ ಅಪಾಯದ ಸಾಧ್ಯತೆ ಹೆಚ್ಚಿರುವ ಕುರಿತು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಗೆ ಒಳಪಡುವ ಘಾಟಿ ರಸ್ತೆಯ ತಡೆಗೋಡೆಯ ಸಮೀಪ ಚಿರತೆ ಕಾಣಿಸಿಕೊಂಡಿದ್ದು, ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವುದರ ಜೊತೆಗೆ ಮಳೆಗಾಲ ಆರಂಭವಾಗಿರುವುದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಮಳೆ ಮತ್ತು ದಟ್ಟ ಮಂಜಿನಿಂದ ದೃಶ್ಯತೆ ಕಡಿಮೆಯಾಗುತ್ತಿರುವ ಕಾರಣ ರಸ್ತೆ ಬದಿ ಅಥವಾ ಅರಣ್ಯ ಪ್ರದೇಶದ ಸಮೀಪ ಕಾಡುಪ್ರಾಣಿಗಳ ಚಲನವಲನ ತಕ್ಷಣ ಗಮನಕ್ಕೆ ಬಾರದಿರುವ ಸಾಧ್ಯತೆ ಇದ್ದು, ಇಂತಹ ಸಂದರ್ಭಗಳಲ್ಲಿ ಫೋಟೋ ಅಥವಾ ಸೆಲ್ಫಿ ಪಡೆಯಲು ವಾಹನದಿಂದ ಇಳಿಯುವ ಪ್ರವಾಸಿಗರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ. ಚಾರ್ಮಾಡಿ ಘಾಟಿ ಸಂಪೂರ್ಣ ಅರಣ್ಯ ವಲಯವಾಗಿರುವುದರಿಂದ ಕಾಡುಪ್ರಾಣಿಗಳ ಸಂಚಾರ ಸಹಜವಾಗಿದ್ದರೂ, ಮಾನವ ಚಟುವಟಿಕೆ ಹೆಚ್ಚಿರುವ ರಸ್ತೆಯ ಸಮೀಪ ಚಿರತೆ ಕಾಣಿಸಿಕೊಂಡಿರುವುದು ಗಮನಾರ್ಹವಾಗಿದೆ. ಹೀಗಾಗಿ ವಾಹನ ನಿಲ್ಲಿಸುವ ವೇಳೆ ಸುರಕ್ಷಿತ ಸ್ಥಳ ಆಯ್ಕೆ ಮಾಡುವುದು, ರಸ್ತೆ ಅಂಚಿಗೆ ಗುಂಪಾಗಿ ತೆರಳುವುದನ್ನು ತಪ್ಪಿಸುವುದು ಹಾಗೂ ಕಾಡುಪ್ರಾಣಿಗಳ ಹತ್ತಿರ ಹೋಗಲು ಅಥವಾ ಅವುಗಳೊಂದಿಗೆ ಫೋಟೋ ತೆಗೆಯಲು ಯತ್ನಿಸದೇ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.




