
ಬೆಂಗಳೂರು: ರಾಜ್ಯ ಸರ್ಕಾರಿ ಶಾಲಾ ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿದ್ದ ಉದ್ಯೋಗಾಕಾಂಕ್ಷಿಗಳಿಗೆ ಶಿಕ್ಷಣ ಇಲಾಖೆಯಿಂದ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಮುಂದಿನ 100 ದಿನಗಳೊಳಗೆ 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ ಮುಂದಿನ ವಾರದಲ್ಲೇ ಪ್ರಕಟವಾಗಲಿದ್ದು, ಎರಡು ತಿಂಗಳೊಳಗೆ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸುವ ಗುರಿ ಹೊಂದಲಾಗಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 80 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇರುವ ಹಿನ್ನೆಲೆಯಲ್ಲಿ ಒಟ್ಟು 51 ಸಾವಿರ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿದ್ದು, ಮೊದಲ ಹಂತದಲ್ಲಿ 15 ಸಾವಿರ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಇದರೊಂದಿಗೆ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣವನ್ನು ಬಲಪಡಿಸುವ ಉದ್ದೇಶದಿಂದ 2,500 ಐಟಿ ಶಿಕ್ಷಕರ ನೇಮಕಕ್ಕೂ ಕ್ರಮ ಕೈಗೊಳ್ಳಲಾಗಿದೆ. ಹೊಸ ಸಿಆರ್ ಆಂಡ್ ಆರ್ ನಿಯಮಾವಳಿಗಳ ಅಡಿಯಲ್ಲಿ PSTR, GPSTR ಹಾಗೂ HSTR ಹುದ್ದೆಗಳ ಸಮಗ್ರ ವಿವರಗಳನ್ನು ಇಲಾಖೆ ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದು, ಈ ಶೈಕ್ಷಣಿಕ ವರ್ಷದಲ್ಲೇ ಹೊಸ ಶಿಕ್ಷಕರು ಶಾಲೆಗಳಲ್ಲಿ ಸೇವೆ ಆರಂಭಿಸುವ ನಿರೀಕ್ಷೆ ಇದೆ. ಹಲವು ವರ್ಷಗಳಿಂದ ಶಿಕ್ಷಕರ ನೇಮಕಾತಿಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದ್ದು, ಪರೀಕ್ಷಾ ಸಿದ್ಧತೆಯನ್ನು ತಕ್ಷಣ ಆರಂಭಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.




