
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2,000 ರೂ. ಪಡೆಯುತ್ತಿರುವ ಫಲಾನುಭವಿ ಮಹಿಳೆಯರಿಗೆ ಇದೀಗ ಹೊಸ ನಿಯಮ ಜಾರಿಯಾಗಿದ್ದು, ಇನ್ನು ಮುಂದೆ ಯೋಜನೆಯ ಹಣ ಪಡೆಯಲು ಬಯೋಮೆಟ್ರಿಕ್ ಕಡ್ಡಾಯಗೊಳಿಸಲಾಗಿದೆ. ಸರ್ಕಾರದ ಆದೇಶದಂತೆ ಫಲಾನುಭವಿಗಳು ಒಂದು ತಿಂಗಳೊಳಗೆ ಬಯೋಮೆಟ್ರಿಕ್ ಪ್ರಕ್ರಿಯೆ ಪೂರ್ಣಗೊಳಿಸಬೇಕು, ಇಲ್ಲದಿದ್ದರೆ ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುವುದನ್ನು ಸ್ಥಗಿತಗೊಳಿಸಬಹುದು. ಫಲಾನುಭವಿಗಳ ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಪರ್ಕ ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಇ-ಕೆವೈಸಿ (e-KYC) ಪ್ರಕ್ರಿಯೆ ಜಾರಿಗೊಳಿಸಲಾಗಿದ್ದು, ಬೆಂಗಳೂರು ಒನ್, ಗ್ರಾಮ ಒನ್, ಸೇವಾ ಕೇಂದ್ರ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ನೋಂದಣಿ ಮಾಡಿಸಬಹುದಾಗಿದೆ. ಈ ಪ್ರಕ್ರಿಯೆಗೆ 5 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಬಯೋಮೆಟ್ರಿಕ್ ವೇಳೆ ಆಧಾರ್ ಕಾರ್ಡ್ ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿರುವ ಐಡಿ ಕಾರ್ಡ್ ಸಲ್ಲಿಸುವುದು ಕಡ್ಡಾಯವಾಗಿದೆ. ಸೇವಾ ಕೇಂದ್ರಗಳಲ್ಲಿ ಹೆಬ್ಬೆರಳಿನ ಗುರುತು, ಕಣ್ಣಿನ ಸ್ಕ್ಯಾನ್ ಅಥವಾ ಫೇಸ್ ಸ್ಕ್ಯಾನ್ ಮೂಲಕ ಪರಿಶೀಲನೆ ನಡೆಸಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ಜಾತಿ ಪ್ರಮಾಣಪತ್ರದಲ್ಲಿರುವ RD ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕಿದ್ದು, ಸಂಪೂರ್ಣ ಅರ್ಜಿ ಭರ್ತಿ ಮಾಡಿದ ಬಳಿಕವೇ ಯೋಜನೆಯ ಹಣ ಬಿಡುಗಡೆಯಾಗಲಿದೆ. ರಾಜ್ಯದಲ್ಲಿ ಸುಮಾರು 1.30 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದು, ಯೋಜನೆಯಲ್ಲಿ ಅಕ್ರಮ ಹಾಗೂ ದುರುಪಯೋಗ ತಡೆಗಟ್ಟಲು, ಅರ್ಹರಲ್ಲದವರು ಅಥವಾ ಮರಣ ಹೊಂದಿದವರ ಖಾತೆಗಳಿಗೆ ಹಣ ವರ್ಗಾವಣೆಯಾಗುವುದನ್ನು ತಪ್ಪಿಸಲು ಮತ್ತು ಕೇವಲ ಜೀವಂತ ಹಾಗೂ ಅರ್ಹ ಮಹಿಳೆಯರಿಗೆ ಮಾತ್ರ ಸೌಲಭ್ಯ ತಲುಪುವಂತೆ ಮಾಡುವ ಉದ್ದೇಶದಿಂದ ಸರ್ಕಾರ ಈ ಕಡ್ಡಾಯ ಬಯೋಮೆಟ್ರಿಕ್ ನಿಯಮವನ್ನು ಜಾರಿಗೊಳಿಸಿದೆ.




