
ಬೆಂಗಳೂರು: ಬೆಂಗಳೂರಿನ ಕಸದ ಟೆಂಡರ್ನಲ್ಲಿ 36 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ ನಿಯೋಗವು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದೆ. ಈ ಕುರಿತು ಮಾಹಿತಿ ನೀಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಇದು ಬೆಂಗಳೂರಿನ ಜನರನ್ನು ಬೆಚ್ಚಿಬೀಳಿಸುವಂತಹ ಹಗರಣವಾಗಿದ್ದು, ದೆಹಲಿ ಮೂಲದ ಕಂಪನಿಗೆ ಟೆಂಡರ್ ನೀಡುವ ಮೂಲಕ ದೇಶದಲ್ಲೇ ಅತಿದೊಡ್ಡ ಗಾರ್ಬೇಜ್ ಹಗರಣ ನಡೆದಿದೆ ಎಂದು ಆರೋಪಿಸಿದರು. ಕಸದ ಹೆಸರಿನಲ್ಲಿ 36 ಸಾವಿರ ಕೋಟಿ ರೂ. ಲೂಟಿ ಮಾಡಲಾಗಿದ್ದು, ಇದರಲ್ಲಿ ಕೇಂದ್ರ ಮತ್ತು ರಾಜ್ಯದ ಕಾಂಗ್ರೆಸ್ ನಾಯಕರ ಕೈವಾಡವೂ ಇದೆ ಎಂದು ಗಂಭೀರ ಆರೋಪ ಮಾಡಿರುವ ಅವರು, ಟೆಂಡರ್ ರದ್ದುಪಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಟೆಂಡರ್ ಪಡೆದ ಕಂಪನಿಯನ್ನು ವಿಶ್ವ ಬ್ಯಾಂಕ್ ಡಿಬಾರ್ ಮಾಡಿದ್ದರೂ ಹಾಗೂ ಈ ಹಿಂದೆ 2016ರಲ್ಲಿ ಬಿಬಿಎಂಪಿಯು ಕಂಪನಿಯನ್ನು ಸೇವೆಯಿಂದ ವಜಾಗೊಳಿಸಿದ್ದರೂ ಮತ್ತೆ ಅದೇ ಕಂಪನಿಗೆ ಟೆಂಡರ್ ನೀಡಲಾಗಿದೆ ಎಂದು ಆರೋಪಿಸಿದ ಅಶೋಕ್, ದೆಹಲಿಯಿಂದ ಬಂದ ಒತ್ತಡದ ಹಿನ್ನೆಲೆಯಲ್ಲಿ ಕಳೆದ ಸಚಿವ ಸಂಪುಟ ಸಭೆಯ ಕೊನೆಯಲ್ಲಿ ಈ ವಿಷಯವನ್ನು ಅಜೆಂಡಾಗೆ ಸೇರಿಸಿ ಅನುಮೋದನೆ ಪಡೆಯಲಾಗಿದೆ ಎಂದು ದೂರಿದರು. 36 ಸಾವಿರ ಕೋಟಿ ರೂ. ಮೌಲ್ಯದ ಕಸದ ಟೆಂಡರ್ ವಿಚಾರ ಕೇಳಿ ಸಚಿವರು ಅಚ್ಚರಿಗೊಂಡಿದ್ದರು, ಬಳಿಕ ಇದು ಹೈಕಮಾಂಡ್ನಿಂದ ಬಂದ ವಿಷಯ ಎಂದು ಹೇಳಿದ ನಂತರ ಅನುಮೋದನೆ ದೊರೆಯಿತು ಎಂದು ಆರೋಪಿಸಿದರು. ಕಸದ ಟೆಂಡರ್ ಪರಿಶೀಲನೆಗಾಗಿ ರಚಿಸಿದ್ದ ಸಂಪುಟ ಉಪಸಮಿತಿಯನ್ನು ರದ್ದುಪಡಿಸಿ, ಹೊಸ ಸಮಿತಿಯನ್ನು ರಚಿಸಲಾಗಿದ್ದು, ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದೂ ಅವರು ಹೇಳಿದರು. ಬೆಂಗಳೂರು ನಗರ ಕಸದ ಸಮಸ್ಯೆಯಿಂದ ಬಳಲುತ್ತಿದ್ದರೆ, ಕಸದ ಟೆಂಡರ್ ಮೂಲಕ ಹಣ ಸಂಗ್ರಹಿಸಿ ಹೈಕಮಾಂಡ್ಗೆ ಕಪ್ಪ ಕಾಣಿಕೆ ನೀಡುವ ಯತ್ನ ನಡೆದಿದೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಲೋಕಾಯುಕ್ತ ಕಚೇರಿಗೂ ಅಫಿಡವಿಟ್ ಸಲ್ಲಿಸುವುದಾಗಿ ತಿಳಿಸಿದ್ದಾರೆ.




