
ಆಗುಂಬೆ: ಘಾಟಿಯಲ್ಲಿ ವಾಹನಗಳ ದಟ್ಟಣೆ, ಟ್ರಾಫಿಕ್ ಜಾಮ್ ಹಾಗೂ ಕೆಲವು ತಿರುವುಗಳ ದಂಡೆಗಳ ಕುಸಿತ ಕುರಿತು ಸಾರ್ವಜನಿಕರಿಂದ ಬಂದಿರುವ ದೂರುಗಳ ಹಿನ್ನೆಲೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಹುಲಿಕಲ್ ಘಾಟಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುವುದರಿಂದ ಆಗುಂಬೆ ಘಾಟಿಯಲ್ಲಿ ವಾಹನಗಳ ಒತ್ತಡ ಹೆಚ್ಚಾಗಿದ್ದು, ನಿರ್ಬಂಧವಿದ್ದರೂ ಜಲ್ಲಿಕಲ್ಲು ಹಾಗೂ ಭಾರೀ ತೂಕದ ವಾಹನಗಳ ಸಂಚಾರದಿಂದ ಭೂಕುಸಿತದ ಅಪಾಯ ಎದುರಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ತುರ್ತಾಗಿ ತಿರುವುಗಳ ದಂಡೆಗಳಲ್ಲಿ ಸುಮಾರು ಸಾವಿರ ಮೀಟರ್ ತಡೆಬೇಲಿ ನಿರ್ಮಿಸಲು ಸೂಚನೆ ನೀಡಲಾಗಿದ್ದು, ಘಾಟಿ ರಸ್ತೆಯ ಕುಸಿತ ತಡೆ ಹಾಗೂ ದುರಸ್ತಿ ಕಾಮಗಾರಿಗೆ ಕೇಂದ್ರದ ಸಿಆರ್ಐಎಫ್ ಯೋಜನೆಯಡಿ 15 ಕೋಟಿ ರೂಪಾಯಿ ಮಂಜೂರಾತಿ ದೊರೆತಿದೆ. ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಲಾಗಿದೆ. ಆಗುಂಬೆ ಘಾಟಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸದ ರಾಘವೇಂದ್ರ ಅವರ ಪ್ರಸ್ತಾವನೆಯಂತೆ ಸುರಂಗ ಮಾರ್ಗ ಹಾಗೂ ಈಗಿರುವ ರಸ್ತೆಯನ್ನು ದ್ವಿಪಥಗೊಳಿಸುವ ಕುರಿತು ಡಿಪಿಆರ್ ತಯಾರಿಸಲು ಟೆಂಡರ್ ಕರೆಯಲಾಗಿದ್ದು, ಸಾಧ್ಯತಾ ವರದಿ ಆಧರಿಸಿ ಎರಡು ವಾರಗಳೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಎನ್ಎಚ್ಆರ್ಒ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಭಾರೀ ವಾಹನಗಳ ಸಂಚಾರ ನಿಯಂತ್ರಿಸದಿದ್ದರೆ ಮಳೆಗಾಲದಲ್ಲಿ ಘಾಟಿ ಕುಸಿಯುವ ಅಪಾಯವಿದ್ದು, ಈ ಕುರಿತು ಜಿಲ್ಲಾಧಿಕಾರಿಗಳಿಗೆ ಅಗತ್ಯ ಸಲಹೆ ನೀಡುವಂತೆ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಸ್ತೆ ದ್ವಿಪಥ ಕಾಮಗಾರಿಗೆ ಅಗತ್ಯವಿರುವ ಅರಣ್ಯ ಇಲಾಖೆಯ ಅನುಮತಿ ಪಡೆಯಲು ಎಂಟನೇ ತಿರುವಿನ ಮೇಲ್ಭಾಗದ ಪ್ರದೇಶಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸರಳ ಆಪ್ ಮೂಲಕ ಸಲ್ಲಿಸುವಂತೆ ಸೂಚಿಸಲಾಗಿದೆ.




