
ಶೃಂಗೇರಿ: ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾರವರು ಶೃಂಗೇರಿ ತಾಲ್ಲೂಕು ಮಟ್ಟದ ಇಲಾಖಾ ಅಧಿಕಾರಿಗಳ ಪರಿಶೀಲನಾ ಸಭೆಯನ್ನು ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ನಿನ್ನೆ ನಡೆಸಿದರು. ಪ್ರತಿ ಇಲಾಖಾವಾರು ಅಂಕಿ-ಅಂಶ ಸಮೇತ ಮಾಹಿತಿಯನ್ನು ಇಲಾಖಾ ಅಧಿಕಾರಿಗಳಿಂದ ಪಡೆದು, ಅಭಿವೃದ್ದಿ ಕಾರ್ಯಗಳ ಪ್ರಗತಿಯನ್ನು ಆದ್ಯತೆಯ ಮೇರೆಗೆ ವಿವರಣೆ ಪಡೆದುಕೊಂಡರು. ರಾಷ್ಟ್ರೀಯ ಹೆದ್ದಾರಿ ೧೬೯ರ ತೊಡಕುಗಳನ್ನು ಅಧಿಕಾರಿಗಳಿಂದಲೇ ಪಡೆದು ತ್ವರಿತವಾಗಿ ಸಮಸ್ಯೆ ಪರಿಹರಿಸಿಕೊಂಡು ಕಾರ್ಯ ಮುಗಿಸಬೇಕು, ಭದ್ರತೆಯಿಂದ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿ, ಪಟ್ಟಣ ಪಂಚಾಯಿತಿಯು ಇನ್ನು ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿದರು. ಅಂಗಡಿ ಮಳಿಗೆಗಳಲ್ಲಿನ ಹರಾಜು ಅದರ ಪ್ರಕ್ರಿಯೆಗಳು ಸುಧಾರಿತಕ್ರಮದಲ್ಲಿರಬೇಕು, ಅತೀ ಹೆಚ್ಚು ಪ್ರವಾಸಿಗರು ಭೇಟಿ ಕೊಡುವ ಸ್ಥಳವಾದುದ್ದರಿಂದ ಹೆಚ್ಚು ಸ್ವಚ್ಚತಾ ಕಾರ್ಯ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದು, ನದಿ ನೀರು ಕಲುಷಿತವಾಗುವ ಮೂಲಗಳ ಬಗ್ಗೆ ಸೂಕ್ಷ್ಮ ಗಮನ ನೀಡುವಂತೆ ತಿಳಿಸಿದರು. ಮಲೆನಾಡಿನಲ್ಲಿ ಮಳೆ ಹೆಚ್ಚಿರುವುದರಿಂದ ನಾಗರೀಕ ಜೀವನಕ್ಕೆ ರೈತಾಪಿ ಕಾರ್ಯಗಳಿಗೆ ಎಲ್ಲೆಲ್ಲೂ ತೊಂದರೆಯಾಗದಂತೆ ಜಿಲ್ಲಾಡಳಿತ ನಿಗಾವಹಿಸಿರುವುದನ್ನು ಸಭೆಯ ಗಮನಕ್ಕೆ ತಂದು ಮುಂಜಾಗ್ರತ ನಿಗಾ ಕಾರ್ಯಗಳತ್ತ ಅಧಿಕಾರಿಗಳು ಕಾರ್ಯನಿರ್ವಹಿಸಲು ಸೂಚಿಸಿದರು. ಗ್ರಾಮ ಪಂಚಾಯಿತಿಗಳಲ್ಲಿ ಅಂಗನವಾಡಿ-ಶಾಲೆಗಳಲ್ಲಿ ಆಗಬೇಕಾದ ಅಭಿವೃಧಿ ಕಾರ್ಯ ಸವಲತ್ತುಗಳ ಬಗ್ಗೆ ಕುಲುಂಕುಶ ಮಾಹಿತಿ ಪಡೆದರು. ಆರಕ್ಷಕ, ಅರಣ್ಯ, ಅಗ್ನಿಶಾಮಕ ಮುಂತಾದ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸಿದರು. ಪರಿಶೀಲನಾ ಸಭೆಯಲ್ಲಿ ತಹಶೀಲ್ದಾರ್ ಅನುಪ್ ಸಂಜೋಗ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದೀಪ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.




