
ಚಾಮರಾಜನಗರ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಾಡು ಇಲ್ಲವೇ ಮಡಿ, ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿ ದೇಶಕ್ಕಾಗಿ ತ್ಯಾಗ, ಬಲಿದಾನವನ್ನು ಮಾಡಿದ ಲಕ್ಷಾಂತರ ದೇಶ ಭಕ್ತರಿಗೆ ಗೌರವವನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವೆಂದು ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಜವರೇಗೌಡರವರು ತಿಳಿಸಿದರು. ಅವರು ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಹಾಗೂ ಗಾಂಧಿ ವಾದಿ ಚಾಮರಾಜನಗರದ ಶ್ರೀ ಸಿ ರಂಗಸ್ವಾಮಿ ರವರ ಸ್ಮರಣೆಯ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಒಂದು ಐತಿಹಾಸಿಕ ಚಳುವಳಿ. ಬ್ರಿಟಿಷರ ವಿರುದ್ಧ ಇಡೀ ದೇಶದ ಎಲ್ಲೆಡೆ ಆತ್ಮವಿಶ್ವಾಸ,ಸ್ವಾಭಿಮಾನದಿಂದ ದೇಶಭಕ್ತಿಯ ಮೂಲಕ ಹೋರಾಟ ನಡೆಸಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ಅಂತಿಮವಾದ ಹೋರಾಟವಾಗಿ ಪರಿವರ್ತನೆ ಯಾದದ್ದು ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ. ಲಕ್ಷಾಂತರ ದೇಶಭಕ್ತರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು.ಚಾಮರಾಜನಗರದಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಹತ್ತಾರು ದೇಶಭಕ್ತರುಹೋರಾಟ ನಡೆಸಿ ಜೈಲುವಾಸವನ್ನು ಅನುಭವಿಸಿದರು.ಅದರಲ್ಲಿ ಶ್ರೀ ರಂಗಸ್ವಾಮಿ ರವರ ಸ್ಮರಣೆಯ ಮೂಲಕ ಗೌರವ ಸಲ್ಲಿಸುತ್ತಿರುವುದು ಹೆಮ್ಮೆ ಎಂದು ತಿಳಿಸಿದರು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿಯ ವಿಷಯ ಮಂಡನೆಯನ್ನು ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಉಪನ್ಯಾಸಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಭಾರತದ ಸ್ವಾತಂತ್ರ್ಯ ಚಳುವಳಿ, ಹಿಂಸಾತ್ಮಕ, ಅಹಿಂಸಾತ್ಮಕ ಎರಡು ಮಾರ್ಗದಲ್ಲಿಯೂ ಹೋರಾಟ ನಡೆಸಿದ ವಿರೋಚಿತ ಮಾರ್ಗವಾಗಿದೆ. ತ್ಯಾಗ ಬಲಿದಾನಗಳಿಗೆ ಸಮರ್ಪಿತವಾದ ನೂರಾರು ಕ್ರಾಂತಿಕಾರಿಗಳ ಜೊತೆಗೆ ಮಹಾತ್ಮ ಗಾಂಧೀಜಿಯವರ ಹೋರಾಟವು ನಡೆದು ಅಂತಿಮವಾಗಿ ಸ್ವಾತಂತ್ರ್ಯ ಲಭಿಸಿತು. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು 1947ರ ಅಂತಿಮ ಭಾರತ ಸ್ವಾತಂತ್ರ್ಯದವರೆಗೆ ನೂರಾರು ಚಳುವಳಿ ನಡೆದರೂ ಅಸಹಕಾರ ಚಳುವಳಿ,ಉಪ್ಪಿನ ಸತ್ಯಾಗ್ರಹ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಪ್ರಮುಖವಾದ ಹೋರಾಟವಾಗಿದೆ. 1942 ಆಗಸ್ಟ್ 8ರಂದು ಘೋಷಣೆಯಾಗಿ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಮಹಾತ್ಮ ಗಾಂಧೀಜಿಯವರು ಮೊಳಗಿಸಿದ ಮಾಡು ಇಲ್ಲವೇ ಮಡಿ ಹೋರಾಟ ಭಾರತದ ಜನಸಾಮಾನ್ಯರನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಹೋರಾಟ. ಯಾವ ನಾಯಕನು ಇಲ್ಲದೆ ಜನರೇ ಸ್ವಯಂ ಪ್ರೇರಿತರಾಗಿ ಚಳುವಳಿಯಲ್ಲಿ ಪಾಲ್ಗೊಂಡ ಶ್ರೇಷ್ಠ ಸ್ವದೇಶಿ ಚಳುವಳಿ. ಸ್ವದೇಶಿ ಚಿಂತನೆ, ರಾಷ್ಟ್ರಭಕ್ತಿ,ರಾಷ್ಟ್ರಪ್ರೇಮ ಮಹಿಳೆಯರು,ಮಕ್ಕಳು, ವೃದ್ಧರು, ಯುವಕರು, ಪುರುಷರು, ಕಾರ್ಮಿಕರು ರೈತರು ವಿದ್ಯಾರ್ಥಿಗಳು ಸರ್ವರು ಪಾಲ್ಗೊಂಡ ಮಹಾ ಚಳುವಳಿ ಎಂದು ಬಣ್ಣಿಸಿ ಸಾವಿರಾರು ಸ್ವಾತಂತ್ರ್ಯ ಪ್ರೇಮಿಗಳು ಕ್ರಾಂತಿಕಾರಿಗಳ ತ್ಯಾಗ ಬಲಿದಾನವನ್ನು ಇಂದು ಪ್ರತಿಯೊಬ್ಬರು ನೆನೆಸಿಕೊಂಡು ಗೌರವವನ್ನು ಸಲ್ಲಿಸುವ ಕಾರ್ಯವನ್ನು ಮಾಡಬೇಕು. ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಕ್ರೂರ ಹಿಂಸೆಗೆ ಒಳಗಾದ ನೂರಾರು ದೇಶಭಕ್ತರ ತ್ಯಾಗವನ್ನು ನಾವು ಕಣ್ಣಾರೆ ಕಾಣಬಹುದು ಎಂದು ಸ್ವಾತಂತ್ರ್ಯ ಚಳುವಳಿಯ ವಿವಿಧ ಘಟನೆಗಳನ್ನು ಸವಿವರವಾಗಿ ತಿಳಿಸಿದರು.ಸಭೆಯ ಅಧ್ಯಕ್ಷತೆಯನ್ನು ಹರವೇ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿಯವರು ವಹಿಸಿ ಮಾತನಾಡಿ ಆಗಸ್ಟ್ 8 ಗಾಂಧೀಜಿಯವರ ಘೋಷಣೆ ಆಗಸ್ಟ್ 9 ಇಡೀ ಭಾರತ ದೇಶದಲ್ಲಿ ಸ್ವಾತಂತ್ರದ ಕಹಳೆ ಒಳಗೆತು ಲಕ್ಷಾಂತರ ದೇಶಭಕ್ತರು ಬಂದನಕ್ಕೆ ಒಳಗಾಗಿ, ಬ್ರಿಟಿಷರು ಕ್ರೂರ ಹಿಂಸೆಯನ್ನು ಕೊಟ್ಟರು.ತಮ್ಮ ಛಲವನ್ನು ಬಿಡದೆ ಭಾರತಕ್ಕೆ ಅಂತಿಮವಾಗಿ ಸ್ವಾತಂತ್ರ ಲಭಿಸುವ ವರೆಗೂ ಹೋರಾಟವನ್ನು ನಡೆಸಿದರು. ಚಾಮರಾಜನಗರದ ಸಿ. ರಂಗಸ್ವಾಮಿ ರವರು ಅಂದು ಚಾಮರಾಜನಗರದಲ್ಲಿ ತಮ್ಮ ಸ್ನೇಹಿತರು ಹಾಗೂ ದೇಶಭಕ್ತರ ಜೊತೆ ಚಳುವಳಿಯಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾಗಿದ್ದು ಅವರ ಮಗ ಶ್ರೀನಿವಾಸ ಗೌಡರವರು ಪ್ರತಿ ವರ್ಷ ಈ ಕಾರ್ಯಕ್ರಮವನ್ನು ರೂಪಿಸಿಕೊಂಡು ಬಂದು ಅವರ ಹೆಸರಿನಲ್ಲಿ ಕೆಲವರಿಗೆ ಗೌರವವನ್ನು ಸಲ್ಲಿಸುತ್ತಿರುವುದು ಸಂತೋಷ ತಂದಿದೆ ಎಂದರು. ಅಖಿಲ ಕರ್ನಾಟಕ ಕನ್ನಡ ಮಹಾಸವಾದ ರಾಜ್ಯ ಅಧ್ಯಕ್ಷ ಶ್ರೀನಿವಾಸ ಗೌಡ ಮಾತನಾಡಿ ಶ್ರೀ ರಂಗಸ್ವಾಮಿ ರವರು ಅಪ್ಪಟ ಗಾಂಧಿ ವಾದಿಗಳು ಖಾದಿ ದಾರಿಗಳು. ಕಷ್ಟದಲ್ಲೂ ದೇಶದ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿದ್ದ ರಂಗಸ್ವಾಮಿಯವರು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಪಾಲ್ಗೊಂಡು ಬಂಧನಕ್ಕೆ ಒಳಗಾಗಿ ಜೈಲುವಾಸ ಅನುಭವಿಸಿದವರು. ಅಂತಹ ಸ್ಮರಣೀಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನಮಗೆಲ್ಲರಿಗೂ ಪುಣ್ಯವೆಂದರು. ಶ್ರೀರಂಗ ಸ್ವಾಮಿ ಐ ಎನ್ ಎ ರಾಮರಾವ್, ಕೃಷ್ಣಮೂರ್ತಿ, ಶಂಕರಪ್ಪ, ಕುಮಾರಸ್ವಾಮಿ, ಬಾಯಿ,ಲಲಿತಾಜಿ ಟ್ಯಾಗೇಟ್, ರಂಗಸ್ವಾಮಿ ನಾಯಕ ಇನ್ನೂ ಮುಂತಾದ ಹೋರಾಟಗಾರರು ಸ್ಮರಣೀಯರು ಎಂದರು. 2020ರ ಶ್ರೀ ರಂಗಸ್ವಾಮಿ ಪ್ರಶಸ್ತಿಯನ್ನು ಭಾರತ ಸೇವಾದಳದ ನಿಕಟ ಪೂರ್ವ ಜಿಲ್ಲಾ ಅಧ್ಯಕ್ಷರಾದ ಎಂ ರಾಮಚಂದ್ರ, ಹಿರಿಯ ಹೋರಾಟಗಾರ ವೆಂಕಟರಮಣ ಸ್ವಾಮಿ ಪಾಪು, ಬಿ ಕೆ ರವಿಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖಂಡರಾದ ಎಂ ರಾಮಚಂದ್ರ ರವರು ನಮ್ಮ ತಂದೆಯವರು ಸದಾ ಕಾಲ ಖಾದಿ ವಸ್ತ್ರಧಾರಣಿ ಮಾಡುತ್ತಿದ್ದರು. ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಅವರ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ. ರಂಗಸ್ವಾಮಿ ರವರ ಪ್ರಶಸ್ತಿಗೆ ಪಾತ್ರರಾಗಿರುವುದು ನಮಗೆ ಮತ್ತಷ್ಟು ಸ್ಪೂರ್ತಿ, ಶಕ್ತಿಯನ್ನು ತಂದಿದೆ ಎಂದು ತಿಳಿಸಿದರು. ಸನ್ಮಾನಿತರಾದ ವೆಂಕಟರಮಣ ಸ್ವಾಮಿ ಹಾಗೂ ಬಿ ಕೆ ರವಿಕುಮಾರ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಚಳುವಳಿಗಾರ ಶಾ ಮುರಳಿ,ರಾಜ್ ಗೋಪಾಲ್, ಪನ್ಯದಹುಂಡಿ ರಾಜು, ಶ್ರೀನಿಧಿ, ಶಿವಣ್ಣ,ಲಿಂಗರಾಜು,ಸಿದ್ದರಾಜು, ರವಿಚಂದ್ರಪ್ರಸಾದ್, ಶ್ರೀಮತಿ ಶ್ರೀನಿವಾಸ್ ಗೌಡ, ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮಹೇಶ್, ಸುರೇಶ್, ಇತರರು ಇದ್ದರು.




