
ಕೊಟ್ಟಿಗೆಹಾರ: ಪರಿಸರ ಸಮತೋಲನ ಕಾಪಾಡುವಲ್ಲಿ ಮಳೆಕಾಡುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವುಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಹೇಳಿದರು. ಅರಣ್ಯ ಇಲಾಖೆ ವತಿಯಿಂದ ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಆಯೋಜಿಸಿದ್ದ ವಿಶ್ವ ಮಳೆಕಾಡುಗಳ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತಿಯಾದ ಮಾನವ ಹಸ್ತಕ್ಷೇಪ, ಕೈಗಾರೀಕರಣ ಹಾಗೂ ಅಕ್ರಮ ಮರ ಕಡಿತದಿಂದ ಮಳೆಕಾಡುಗಳು ಅಪಾಯದ ಅಂಚಿನಲ್ಲಿದ್ದು, ಪಶ್ಚಿಮಘಟ್ಟಗಳಲ್ಲಿನ ಮಳೆಕಾಡುಗಳ ರಕ್ಷಣೆಗೆ ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಮೂಡಿಗೆರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಕರ್ಷ್ ಟಿ.ಎಂ ಮಾತನಾಡಿ, ಮಳೆಕಾಡುಗಳ ಸಂರಕ್ಷಣೆಯ ಕುರಿತು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕಿದ್ದು, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಮುತ್ತೋಡಿ ವಲಯದ ಉಪ ವಲಯ ಅರಣ್ಯಾಧಿಕಾರಿ ಕುಮಾರ್ ಬಿ ಮಾತನಾಡಿ, ಭೂಮಿಯ ಹವಾಮಾನ ನಿಯಂತ್ರಣ, ಆಮ್ಲಜನಕ ಉತ್ಪಾದನೆ ಹಾಗೂ ಜೀವವೈವಿಧ್ಯತೆಯ ಸಂರಕ್ಷಣೆಯಲ್ಲಿ ಮಳೆಕಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು. ಎಟಿಡಬ್ಲ್ಯೂಎಎಸ್ ಸಂಸ್ಥೆಯ ರಿಂಕಲ್ ಲೋಬೊ ಅವರು ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಗಳ ರಕ್ಷಣೆ, ಜೀವವೈವಿಧ್ಯತೆ ಸಂರಕ್ಷಣೆ ಹಾಗೂ ಅಳಿವಿನಂಚಿನಲ್ಲಿರುವ ಸಸ್ಯ-ಪ್ರಾಣಿಗಳ ಉಳಿವಿಗೆ ಎಲ್ಲರೂ ಆದ್ಯತೆ ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಣಕಲ್ ಉಪ ವಲಯ ಅರಣ್ಯಾಧಿಕಾರಿ ರಂಜಿತ್ ಪ್ರಾಸ್ತಾವಿಕ ನುಡಿಗಳನ್ನಾಡಿದ್ದು, ವಲಯ ಅರಣ್ಯಾಧಿಕಾರಿ ಮಂಜುನಾಥ್, ತರುವೆ ಏಕಲವ್ಯ ಮಾದರಿ ವಸತಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಎ.ವಿ. ಮನು ಸ್ವಾಗತಿಸಿ, ಆದರ್ಶ್ ವಿ.ಎಸ್ ಕಾರ್ಯಕ್ರಮ ನಿರೂಪಿಸಿದರು. ಚಿತ್ರ: ಅರಣ್ಯ ಇಲಾಖೆ ವತಿಯಿಂದ ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ವಿಶ್ವ ಮಳೆಕಾಡುಗಳ ದಿನಾಚರಣೆ ಕಾರ್ಯಕ್ರಮ ನಡೆಯಿತು.




