
ಚಿಕ್ಕಮಗಳೂರು: ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಸಿ ಗೃಹಿಣಿಯ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ₹30 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಕೇಳಿಬಂದಿದೆ. ಎಡಿಟ್ ಮಾಡಿದ ಫೋಟೋಗಳನ್ನು ಗೃಹಿಣಿಯ ಮೊಬೈಲ್ಗೆ ಕಳುಹಿಸಿ ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹಣ ನೀಡಲು ನಿರಾಕರಿಸಿದ ಬಳಿಕ ಇನ್ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದು ಎಡಿಟ್ ಮಾಡಿದ ಫೋಟೋಗಳನ್ನು ಅಪ್ಲೋಡ್ ಮಾಡಿರುವುದಲ್ಲದೆ, ಗೃಹಿಣಿಯ ಚಿತ್ರವನ್ನು ಬಳಸಿಕೊಂಡು “₹300ಕ್ಕೆ ಲಭ್ಯ” ಎಂದು ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಫೋಟೋಗಳು ವೈರಲ್ ಆಗಿರುವುದನ್ನು ಕಂಡು ಮನನೊಂದ ಗೃಹಿಣಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ. ಈ ಸಂಬಂಧ ಗೃಹಿಣಿಯ ಪತಿ ಲಕ್ಕವಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದೇ ಗ್ರಾಮದ ಅಕ್ಷಯ್ ಹಾಗೂ ಸಾಹುಲ್ ಹಮೀದ್ ಎಂಬ ಇಬ್ಬರು ಯುವಕರು ಮೆಸೇಜ್ ಕಳುಹಿಸಿ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ. ಈ ಹಿಂದೆ ಕೂಡ ಇದೇ ಯುವಕರು ಮತ್ತೊಬ್ಬ ಮಹಿಳೆಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೊಬೈಲ್ ಸಂಖ್ಯೆ ಸೇರಿದಂತೆ ಸಾಕ್ಷ್ಯಾಧಾರಗಳನ್ನು ಒದಗಿಸಿರುವ ಕುಟುಂಬ, ಸಾಮಾಜಿಕ ಜಾಲತಾಣದಲ್ಲಿ ಎಡಿಟ್ ಫೋಟೋಗಳನ್ನು ಹರಿಬಿಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಲಕ್ಕವಳ್ಳಿ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.




