
ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಿದ್ದರಾಮಯ್ಯ ಸೇತುವೆ ಸಮೀಪದ ಮೋರಿಮಠ ಪ್ರದೇಶದಲ್ಲಿ ಭದ್ರಾ ವನ್ಯಜೀವಿ ವಿಭಾಗದ ಅರಣ್ಯ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದೆ. ಭದ್ರಾ ಬ್ಯಾಕ್ವಾಟರ್ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಅರಣ್ಯ ಇಲಾಖೆಯ ವಾಚರ್ ಮೇಲೆ ಕಾಡಾನೆ ಏಕಾಏಕಿ ದಾಳಿ ಮಾಡಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎನ್.ಆರ್.ಪುರ ಪಟ್ಟಣದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ಭದ್ರಾ ಬ್ಯಾಕ್ವಾಟರ್ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಕಾಡಾನೆಗಳ ಚಲನವಲನ ಹೆಚ್ಚಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿಗಾವಹಿಸುತ್ತಿದ್ದು, ಈ ವೇಳೆ ನಡೆದ ದಾಳಿಯಿಂದ ವನ್ಯಜೀವಿ ಸಿಬ್ಬಂದಿಯ ಸುರಕ್ಷತೆ ಕುರಿತಾಗಿ ಮತ್ತೆ ಚರ್ಚೆ ಆರಂಭವಾಗಿದೆ.



