ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಜೇನುಬೈಲು ಗ್ರಾಮದಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ಕುರಿತು ಪ್ರಶ್ನೆ ಮಾಡಿದ ವಿಚಾರಕ್ಕೆ ಇಬ್ಬರ ನಡುವೆ ಉಂಟಾದ ವಾಗ್ವಾದ ಗಲಾಟೆಗೆ ತಿರುಗಿ, ಯುವಕನ ಮೇಲೆ ಮಚ್ಚು ಬೀಸಿದ ಆರೋಪ ಕೇಳಿಬಂದಿದೆ. ಕಾಫಿನಾಡಿನಲ್ಲಿ ಇತ್ತೀಚೆಗೆ ಲಾಂಗು-ಮಚ್ಚುಗಳ ಹಾವಳಿ ಹೆಚ್ಚಾಗುತ್ತಿದ್ದು, ಕ್ಷುಲ್ಲಕ ವಿಚಾರಗಳಿಗೂ ಮಾರಕಾಸ್ತ್ರಗಳನ್ನು ಕೈಗೆತ್ತಿಕೊಳ್ಳುವ ಘಟನೆಗಳು ಮರುಕಳಿಸುತ್ತಿರುವ ನಡುವೆಯೇ ಈ ಘಟನೆ ನಡೆದಿದೆ. ಜೇನುಬೈಲು ಗ್ರಾಮದ ತಾರೇಶ್ ಮತ್ತು ಉದಯ್ ನಡುವೆ ಅಕ್ರಮ ಕಟ್ಟಡದ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ವಾಗ್ವಾದ ತೀವ್ರಗೊಂಡ ಸಂದರ್ಭದಲ್ಲಿ ಉದಯ್ ತಾರೇಶ್ ಮೇಲೆ ಮಚ್ಚು ಬೀಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿ ಉದಯ್ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಘಟನೆ ವೇಳೆ ಸ್ಥಳೀಯರು ಸಮಯೋಚಿತವಾಗಿ ಮಧ್ಯಪ್ರವೇಶಿಸಿ ಇಬ್ಬರ ಜಗಳವನ್ನು ಬಿಡಿಸಿ ಹೆಚ್ಚಿನ ಅನಾಹುತ ಸಂಭವಿಸುವುದನ್ನು ತಡೆದಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಿಂದ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪ್ರಕರಣ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಜೇನುಬೈಲು ಗ್ರಾಮದಲ್ಲಿ ನಡೆದ ಈ ಘಟನೆ ಕಾಫಿನಾಡಿನಲ್ಲಿ ಹೆಚ್ಚುತ್ತಿರುವ ಮಾರಕಾಸ್ತ್ರಗಳ ಬಳಕೆಯ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿಸಿದೆ.
