
ಸಂತೆಬೆನ್ನೂರು: ಗ್ರಾಮೀಣ ಮಕ್ಕಳಲ್ಲಿ ಶಕ್ತಿ ಮತ್ತು ಯುಕ್ತಿ ಅಪಾರವಾಗಿದ್ದು, ಅವರ ಭವಿಷ್ಯ ರೂಪುಗೊಳ್ಳಲು ಶಿಕ್ಷಣದ ಜೊತೆಗೆ ಕ್ರೀಡೆ, ಸಾಹಿತ್ಯ ಹಾಗೂ ಪ್ರಚಲಿತ ಜ್ಞಾನವೂ ಅಷ್ಟೇ ಅಗತ್ಯವಾಗಿದೆ. ಸಾಧನೆ ಸಂಪತ್ತಾಗಬೇಕು, ಸಂಪತ್ತು ಸಾಧನೆಯಾಗಬಾರದು ಎಂದು ಚನ್ನಗಿರಿ ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ ಅಭಿಪ್ರಾಯಪಟ್ಟರು. ಪಟ್ಟಣದ ಚೈತನ್ಯ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ದಶಯಾನ ಕಾರ್ಯಕ್ರಮದ ಅಂಗವಾಗಿ ನಿರ್ಮಿಸಲಾದ ಲೆದರ್ ಬಾಲ್ ಕ್ರಿಕೆಟ್ ಮೈದಾನ, ಬಿಲ್ಲುವಿದ್ಯೆ ಕ್ರೀಡಾಂಗಣ ಹಾಗೂ ಮಾಂಟೆಸ್ಸೋರಿ ಲ್ಯಾಬ್ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕಿದ್ದು, ಏಕಮುಖ ಪ್ರತಿಭೆಗಿಂತ ಬಹುಮುಖ ಪ್ರತಿಭೆಯು ವ್ಯಕ್ತಿತ್ವ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು. ಗ್ರಾಮೀಣ ಮಕ್ಕಳಲ್ಲಿರುವ ಶಕ್ತಿ ಮತ್ತು ಯುಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ ಎಂದು ತಿಳಿಸಿದ ಅವರು, ಗುರುಕುಲ ಶಾಲೆಯು ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿ ಸೂಕ್ತ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದರು. ಜನಪದ ಹಾಗೂ ಪರಂಪರೆಯ ಕ್ರೀಡೆಯಾದ ಬಿಲ್ಲುವಿದ್ಯೆಯಲ್ಲಿ ಗ್ರಾಮೀಣ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು. ಗುರುಕುಲ ವಿದ್ಯಾಸಂಸ್ಥೆಯ ಅಧ್ಯಕ್ಷ ನಾಗರಾಜ್ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಜನಪದ ಹಾಗೂ ರಾಷ್ಟ್ರೀಯ ಕ್ರೀಡೆಗಳಲ್ಲಿ ತರಬೇತಿ ನೀಡುವ ಮೂಲಕ ಅವರ ಉಜ್ವಲ ಭವಿಷ್ಯಕ್ಕಾಗಿ ವಿಶೇಷ ಗಮನ ಹರಿಸಲಾಗುತ್ತಿದೆ ಎಂದರು. ಪ್ರಾಥಮಿಕ ಹಂತದಲ್ಲಿಯೇ ಮಲ್ಲಗಂಬ, ಯೋಗ, ಕ್ರಿಕೆಟ್ ಹಾಗೂ ಬಿಲ್ಲುವಿದ್ಯೆ ಸೇರಿದಂತೆ ವಿವಿಧ ಕ್ರೀಡೆಗಳಿಗೆ ತರಬೇತಿ ನೀಡಲು ವಿಶೇಷ ಕ್ರೀಡಾಂಗಣಗಳನ್ನು ನಿರ್ಮಿಸಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ತರಬೇತುದಾರರನ್ನು ನೇಮಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಿಎಸ್ಐ ಜಗದೀಶ್, ಸಹನಾ ನಾಗರಾಜ್, ಕಾರ್ಯದರ್ಶಿ ಶಿವಸ್ವಾಮಿ, ಮುಖ್ಯ ಶಿಕ್ಷಕಿ ಅಂಬಿಕಾ ಷಣ್ಮುಖ, ಕ್ರಿಕೆಟ್ ಕೋಚ್ ತಿಮ್ಮೇಶ್, ಬಿಲ್ಲುವಿದ್ಯೆ ಕೋಚ್ ಅರುಣ್, ವರ್ಷಿತಾ ಜಗದೀಶ್ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.
ವರದಿ: ಅರುಣ್ ಕುಮಾರ್, ಕುಳೇನೂರು




