ಚನ್ನಗಿರಿ: ತಾಲೂಕಿನ ಸಂತೇಬೆನ್ನೂರು ಪಟ್ಟಣದ ಸರ್ಕಾರಿ ಕೆಪಿಎಸ್ ಶಾಲೆಯಲ್ಲಿ ಬೆಂಗಳೂರಿನ ರಾಜಮನೆ ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 50 ಸಾವಿರ ಉಚಿತ ನೋಟ್ಬುಕ್ಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಲ್ಕೆಜಿ ಯಿಂದ ಪಿಯುವರೆಗಿನ ಸುಮಾರು 1500 ವಿದ್ಯಾರ್ಥಿಗಳಿಗೆ ಉಚಿತ ನೋಟ್ಬುಕ್ ಹಾಗೂ ಪೆನ್ನುಗಳನ್ನು ವಿತರಿಸಿ ಮಾತನಾಡಿದ ಫೌಂಡೇಶನ್ ಸಂಸ್ಥಾಪಕ ಸನ್ನಿ ಆರ್. ರಾಜಮನೆ, ತಮ್ಮ ದುಡಿಮೆಯ ಲಾಭದ ಒಂದು ಭಾಗವನ್ನು ಸಮಾಜಕ್ಕೆ ದಾನ-ದೇಣಿಗೆಯ ರೂಪದಲ್ಲಿ ನೀಡುವುದರಿಂದ ಆತ್ಮತೃಪ್ತಿ ಹಾಗೂ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು. ಕಳೆದ 12 ವರ್ಷಗಳಿಂದ ನಿರಂತರವಾಗಿ ಮಕ್ಕಳಿಗೆ ನೋಟ್ಬುಕ್ಗಳನ್ನು ವಿತರಿಸುತ್ತಿದ್ದು, ಸರ್ಕಾರಿ ಶಾಲಾ ಮಕ್ಕಳು ಮೂಲಸೌಕರ್ಯಗಳ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ತಮ್ಮ ಫೌಂಡೇಶನ್ ಮೂಲಕ ಸಾಧ್ಯವಾದಷ್ಟು ನೆರವು ನೀಡುತ್ತಿರುವುದಾಗಿ ತಿಳಿಸಿದರು. ಸರ್ಕಾರ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನೋಟ್ಬುಕ್ಗಳನ್ನು ಒದಗಿಸಿದರೆ ತಮ್ಮ ಸಂಸ್ಥೆಯಿಂದ ಕ್ರೀಡಾ ಸಾಮಗ್ರಿಗಳನ್ನು ನೀಡುವ ಯೋಜನೆ ಹೊಂದಿರುವುದಾಗಿ ಹೇಳಿದರು. ಶಿಕ್ಷಣವೇ ಪ್ರತಿಯೊಬ್ಬರ ಬದುಕಿಗೆ ಬೆಳಕು ನೀಡುವ ಶಕ್ತಿಯಾಗಿದ್ದು, ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ತಮ್ಮ ಶ್ರಮದ ಫಲದಿಂದ ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಪರಿಷತ್ತಿನ ನಿವೃತ್ತ ಅಧಿಕಾರಿ ಡಾ. ಎಂ. ಜಯಪ್ಪ, ದಾನ ಮತ್ತು ದೇಣಿಗೆಗಳು ಜೀವನದ ಸಾರ್ಥಕತೆಯನ್ನು ಹೆಚ್ಚಿಸುವ ಕಾರ್ಯಗಳಾಗಿದ್ದು, ತಣಿಗೆರೆ ಗ್ರಾಮದ ರಾಜಮನೆ ಫೌಂಡೇಶನ್ ನಿರ್ಮಾತೃ ಸನ್ನಿ ರಾಜಮನೆ ಅವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ ಎಂದು ಹೇಳಿದರು. ಬಡ ಹಾಗೂ ಸೌಲಭ್ಯ ವಂಚಿತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ತಮ್ಮ ದುಡಿಮೆಯ ಒಂದು ಭಾಗವನ್ನು ಮೀಸಲಿಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದರು. ಇನ್ಸೈಟ್ ಸಂಸ್ಥೆಯ ಸ್ಥಾಪಕ ವಿನಯ್ ಕುಮಾರ್ ಮಾತನಾಡಿ, ಇಂದಿನ ಮಕ್ಕಳು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಬೇಕಿರುವುದರಿಂದ ಶಾಲಾ ಹಂತದಿಂದಲೇ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು, ಪ್ರತಿದಿನ ಪತ್ರಿಕೆಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಹಾಗೂ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಜ್ಞಾನ ಸಂಪಾದಿಸಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರತಿನಿಧಿ ಸಂತೋಷ್ ರಾಜಮನೆ, ಉಪ ಪ್ರಾಂಶುಪಾಲ ಸಿದ್ದೇಶ್, ರಂಗನಾಥ್, ಮುಖ್ಯ ಶಿಕ್ಷಕ ಎಚ್.ಎನ್. ರವಿ, ಪಾಪಯ್ಯ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಬಿ. ಕಿರಣ್, ಸಂತೋಷ್, ಎಂ.ಬಿ. ನಾಗರಾಜ್, ಮಲ್ಲೇಶ್, ಡ್ಯಾಮೇಜ್ ಹಾಗೂ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಅರುಣ್ ಕುಮಾರ್ ಕೊಳೆನೂರು.
