
ಚಿಕ್ಕಮಗಳೂರು: ನಗರದ ಹೊರವಲಯದ ವಾಜಪೇಯಿ ಲೇಔಟ್ನಲ್ಲಿ ಯುವಕನೊಬ್ಬ ನಡು ರಸ್ತೆಯಲ್ಲೇ ತಲ್ವಾರ್ನಿಂದ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಘಟನೆ ಬೆಳಕಿಗೆ ಬಂದಿದೆ. ಮಹಮ್ಮದ್ ಸಮೀರ್ ಎಂಬ 20 ವರ್ಷದ ಯುವಕ ಮಧ್ಯರಾತ್ರಿ ವೇಳೆ ಕಾರಿನಿಂದ ರೌಡಿ ಸ್ಟೈಲ್ನಲ್ಲಿ ಕೆಳಗಿಳಿದು, ಸುಮಾರು ಎರಡೂವರೆ ಅಡಿ ಉದ್ದದ ಲಾಂಗ್ (ತಲ್ವಾರ್) ಬಳಸಿ ಕಾರಿನ ಬಾನೆಟ್ ಮೇಲೆ ಇರಿಸಲಾಗಿದ್ದ 5 ಕೆಜಿಗೂ ಅಧಿಕ ತೂಕದ ಬೃಹತ್ ಕೇಕ್ ಕತ್ತರಿಸಿದ್ದಾನೆ. ಈ ವೇಳೆ ಸುಮಾರು 10ಕ್ಕೂ ಹೆಚ್ಚು ಸ್ನೇಹಿತರು ಸ್ಥಳದಲ್ಲಿದ್ದು, ಸಾರ್ವಜನಿಕ ರಸ್ತೆಯಲ್ಲೇ ಸಂಭ್ರಮಾಚರಣೆ ನಡೆಸಲಾಗಿದೆ. ತಲ್ವಾರ್ ಹಿಡಿದು ಸಾರ್ವಜನಿಕ ವಲಯದಲ್ಲಿ ಪ್ರದರ್ಶನ ನೀಡಿದ ಆರೋಪದ ಜೊತೆಗೆ ಜನರಲ್ಲಿ ಭೀತಿ ಉಂಟುಮಾಡಿ ಶಾಂತಿ ಭಂಗಕ್ಕೆ ಕಾರಣನಾದ ಆರೋಪವೂ ಕೇಳಿಬಂದಿದೆ. ಈ ಸಂಪೂರ್ಣ ದೃಶ್ಯವನ್ನು ಸ್ನೇಹಿತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಹುಟ್ಟುಹಬ್ಬ ಆಚರಣೆ ಹೆಸರಿನಲ್ಲಿ ಕಾನೂನು ಉಲ್ಲಂಘನೆ ನಡೆದಿರುವ ಹಿನ್ನೆಲೆ ಮಹಮ್ಮದ್ ಸಮೀರ್ ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತಲ್ವಾರ್ ಹಿಡಿದು ರಸ್ತೆಯಲ್ಲಿ ತಿರುಗಾಡಿದ ಹಾಗೂ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತಂದ ಆರೋಪಗಳಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ. ವೈರಲ್ ವಿಡಿಯೋ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.




