
ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಕಾಡುಕೋಣಗಳ ಕಾಟ ಮಿತಿ ಮೀರುತ್ತಿದ್ದು, ಕಾಫಿ ಹಾಗೂ ಟೀ ಎಸ್ಟೇಟುಗಳಲ್ಲೇ ಕಾಡುಕೋಣಗಳ ಹಿಂಡು ಬೀಡು ಬಿಟ್ಟಿದೆ. ಕೊಪ್ಪ ತಾಲೂಕಿನ ಎಲೆಮಡಲು ಸಮೀಪದ ಟೀ ಎಸ್ಟೇಟಿನಲ್ಲಿ ಕಾಡುಕೋಣಗಳು ತಂಗಿ ಟೀ ಸೊಪ್ಪನ್ನು ನಾಶ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಕಳಸ ತಾಲೂಕಿನಲ್ಲಿ ಕೂಡ ಕಾಡುಕೋಣಗಳ ಕಾಟ ನಿರಂತರವಾಗಿದ್ದು, ಎರಡು ಕಾಟಿಗಳ ನಡುವಿನ ಜಗಳದಲ್ಲಿ ಒಂದು ಕಾಟಿ ಸುಮಾರು 50 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿಕಿತ್ಸೆ ನೀಡಿದರೂ ಕಾಡುಕೋಣವನ್ನು ಉಳಿಸಲಾಗಲಿಲ್ಲ. ಮಲೆನಾಡು ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಮೂರು ದಿನಗಳ ಹಿಂದೆ ಕಾಡುಕೋಣ ದಾಳಿಗೆ ಯುವಕನೊಬ್ಬ ಸಾವನ್ನಪ್ಪಿದ್ದ ಘಟನೆ ಕೂಡ ನಡೆದಿದೆ. ಕಾಫಿತೋಟ ಮತ್ತು ಟೀ ಎಸ್ಟೇಟುಗಳಲ್ಲಿ ಕಾಡುಕೋಣಗಳ ಹಿಂಡು ನಿರಂತರವಾಗಿ ತಂಗಿರುವುದರಿಂದ ಸ್ಥಳೀಯರು ಆತಂಕದಲ್ಲಿದ್ದಾರೆ.



