
ಬೆಂಗಳೂರು : ಕರ್ನಾಟಕದಲ್ಲಿ ಬಿಸಿಲು ಮತ್ತು ತೀವ್ರ ಬೇಗೆ ಹೆಚ್ಚಾಗಿದ್ದು, ಈ ವರ್ಷ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚಿನ ಮಟ್ಟಕ್ಕೇರಿದೆ. ಬೆಂಗಳೂರಿನಲ್ಲಿ 36 ರಿಂದ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಕರಾವಳಿ ಭಾಗಗಳಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣ ಮುಂದುವರಿದಿದೆ. ಉತ್ತರ ಕರ್ನಾಟಕದಲ್ಲಿ ಹೀಟ್ ವೇವ್ ತೀವ್ರವಾಗಿದ್ದು, ಕಲಬುರಗಿ ಮತ್ತು ರಾಯಚೂರಿನಲ್ಲಿ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ದಾಟಿದೆ. ಇದರ ನಡುವೆಯೇ ಮಳೆಗಾಲ ಪೂರ್ವ ಚಟುವಟಿಕೆಗಳು ಜೋರಾಗುತ್ತಿದ್ದು, ಬೆಳಗಾವಿ, ಧಾರವಾಡ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಮಳೆ ಹೆಚ್ಚಾಗಿದೆ. ನೈಸರ್ಗಿಕ ವಿಪತ್ತು ನಿರ್ವಹಣಾ ವರದಿಯ ಪ್ರಕಾರ, ಕರ್ನಾಟಕದಲ್ಲಿ ನೈಸರ್ಗಿಕ ವಿಕೋಪಗಳಿಂದ ಸಂಭವಿಸುವ ಸಾವುಗಳಲ್ಲಿ ಸಿಡಿಲು ಪ್ರಮುಖ ಕಾರಣವಾಗಿದ್ದು, ಒಟ್ಟು ಸಾವಿನ ಶೇಕಡಾ 56ರಷ್ಟು ಸಿಡಿಲಿನಿಂದಲೇ ಸಂಭವಿಸಿದೆ. 2023-24ರ ವರದಿ ಪ್ರಕಾರ ದೇಶದಲ್ಲಿ ಕರ್ನಾಟಕ ಒಂಬತ್ತನೇ ಸ್ಥಾನದಲ್ಲಿದ್ದರೂ ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. 2022-23ರಿಂದ 2023-24ರವರೆಗೆ ಮಿಂಚು ಭೂಮಿಗೆ ಬಡಿಯುವ ಪ್ರಮಾಣ ಕಡಿಮೆಯಾಗಿದ್ದರೂ ಸಾವಿನ ಸಂಖ್ಯೆ ಹೆಚ್ಚಾಗಿದೆ. 2011ರಿಂದ 2023ರವರೆಗೆ ಬೆಳಗಾವಿ, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಾವುಗಳು ದಾಖಲಾಗಿದ್ದು, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗ ಮತ್ತು ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಮೇ ತಿಂಗಳಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿವೆ. 2022-23ರಲ್ಲಿ 100, 2023-24ರಲ್ಲಿ 61, 2024-25ರಲ್ಲಿ 83 ಮತ್ತು 2025-26ರಲ್ಲಿ ಇದುವರೆಗೆ 77 ಸಾವುಗಳು ವರದಿಯಾಗಿವೆ. ಹವಾಮಾನ ವೈಪರೀತ್ಯದಿಂದ ಮಿಂಚಿನ ಪ್ರಮಾಣ ಹೆಚ್ಚಾಗುತ್ತಿದ್ದು, ತಾಪಮಾನದಲ್ಲಿ ಸಣ್ಣ ಏರಿಕೆಯಾಗಿದ್ದರೂ ಮಿಂಚಿನ ಸಾಂದ್ರತೆ ಹೆಚ್ಚುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸಿಡಿಲಿನಿಂದ ಸಾವನ್ನು ಕಡಿಮೆ ಮಾಡಲು ಜನಜಾಗೃತಿ ಅಗತ್ಯವಿದ್ದು, ಮಧ್ಯಾಹ್ನದ ಬಳಿಕ ಸಿಡಿಲಿನ ಅಪಾಯ ಹೆಚ್ಚಾಗುತ್ತದೆ. ವಿಶೇಷವಾಗಿ ಹೊಲಗಳಲ್ಲಿ ಕೆಲಸ ಮಾಡುವ ರೈತರು ಹಾಗೂ ಕುರಿ-ದನಗಳನ್ನು ಮೇಯಿಸುವವರು ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಿದ್ದಾರೆ ಎಂದು ತಜ್ಞರು ಎಚ್ಚರಿಸಿದ್ದಾರೆ.




