
ಚಿಕ್ಕಮಗಳೂರು: ಚನ್ನಗೋಡನಹಳ್ಳಿ ಸಮೀಪ ಮುಳ್ಳಯ್ಯನಗಿರಿ ಮಾರ್ಗದಲ್ಲಿ ಸಾಗುತ್ತಿದ್ದ ಪ್ರವಾಸಿ ಬೈಕ್ ಮೇಲೆ ಮರ ಬಿದ್ದಿದ್ದು, ಮರದ ತುದಿ ಭಾಗ ಮಾತ್ರ ಬೈಕ್ ಮೇಲೆ ಬಿದ್ದ ಪರಿಣಾಮ ಸವಾರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆ ಕಡಿಮೆಯಾಗಿದ್ದರೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭೂಮಿಯ ತೇವಾಂಶ ಇನ್ನೂ ಹೆಚ್ಚಿರುವ ಕಾರಣ ಅಲ್ಲಲ್ಲಿ ಭೂಕುಸಿತಗಳು ಸಂಭವಿಸುತ್ತಿದ್ದು, ಜೊತೆಗೆ ಭಾರೀ ಗಾಳಿಯಿಂದ ಮರಗಳು ಬುಡಸಮೇತ ಉರುಳುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಮುಳ್ಳಯ್ಯನಗಿರಿ–ದತ್ತಪೀಠ ಮಾರ್ಗದಲ್ಲಿ ಈಗಾಗಲೇ ಹಲವು ಕಡೆ ಭೂಕುಸಿತ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು ಮತ್ತು ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ಪ್ರಯಾಣಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.




