
ಚಾಮರಾಜನಗರ: ಆಧುನಿಕ ಮೈಸೂರು ರಾಜ್ಯದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿ, ದೂರದೃಷ್ಟಿಯ ಆಡಳಿತದ ಮೂಲಕ ಇತಿಹಾಸದಲ್ಲಿ ಅಳಿಸಲಾಗದ ಸ್ಥಾನ ಪಡೆದವರು ರಾಜಮಾತೆ ಶ್ರೀಮತಿ ಕೆಂಪನಂಜಮ್ಮಣ್ಣಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ಹೇಳಿದರು. ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಆಯೋಜಿಸಿದ್ದ “ಮೈಸೂರು ರಾಜಮಾತೆ ಶ್ರೀಮತಿ ಕೆಂಪನಂಜಮ್ಮಣ್ಣಿ ಅವರ ಕೊಡುಗೆಗಳು” ಕುರಿತ ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ಅವರು, ಅಪ್ರಾಪ್ತ ವಯಸ್ಸಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪರವಾಗಿ ರಾಜಪ್ರತಿನಿಧಿಯಾಗಿ ಆಡಳಿತ ನಡೆಸಿದ ಕೆಂಪನಂಜಮ್ಮಣ್ಣಿ ಅವರು ಶಿಕ್ಷಣ, ಆರೋಗ್ಯ, ಮಹಿಳಾ ಶಿಕ್ಷಣ, ವಾಣಿವಿಲಾಸ ಅಣೆಕಟ್ಟು, ವಿಕ್ಟೋರಿಯಾ ಆಸ್ಪತ್ರೆ, ಮಾರಿಕಣಿವೆ ಯೋಜನೆ, ಕೃಷಿ, ಕೈಗಾರಿಕೆ, ಕೋಲಾರದ ಚಿನ್ನದ ಗಣಿ ಅಭಿವೃದ್ಧಿ ಹಾಗೂ ಮೈಸೂರು–ಬೆಂಗಳೂರು ನಗರಗಳಿಗೆ ಶುದ್ಧ ನೀರಿನ ವ್ಯವಸ್ಥೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದೂರದೃಷ್ಟಿಯ ಯೋಜನೆಗಳನ್ನು ಜಾರಿಗೆ ತಂದರು ಎಂದು ವಿವರಿಸಿದರು. ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣದ ವೇಳೆ ಹಣಕಾಸಿನ ಸಂಕಷ್ಟ ಎದುರಾದಾಗ ತಮ್ಮ ಆಭರಣಗಳನ್ನು ದಾನವಾಗಿ ನೀಡಿ ಯೋಜನೆಗೆ ಬೆಂಬಲ ನೀಡಿದ ಅವರ ತ್ಯಾಗ ಇಂದಿಗೂ ಮಾದರಿಯಾಗಿದೆ. ಯುವಜನತೆ ಇಂತಹ ಮಹಾನ್ ವ್ಯಕ್ತಿತ್ವಗಳ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯೆ ಸರಸ್ವತಿ ಅವರು ರಾಜಮಾತೆ ಕೆಂಪನಂಜಮ್ಮಣ್ಣಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ಕೆ. ಆರಾಧ್ಯ, ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣಕ್ಕೆ ರಾಜಮಾತೆ ನೀಡಿದ ಪ್ರೋತ್ಸಾಹ ಮತ್ತು ತ್ಯಾಗ ಮೈಸೂರು ಭಾಗದ ಸಮಗ್ರ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪದ್ಮ ಪುರುಷೋತ್ತಮ್, ಶಿವಲಿಂಗಮೂರ್ತಿ, ರವಿಚಂದ್ರ ಪ್ರಸಾದ್ ಕಹಳೆ, ಪೃಥ್ವಿ, ಮೋಹನ್, ಮಹೇಂದ್ರ, ಮಹೇಶ್, ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




