
ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡಿದ್ದ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆಗಸ್ಟ್ 5ರಂದು ಮಧ್ಯಾಹ್ನ ಆಲ್ದೂರು ಸಂತೆ ಮೈದಾನದಲ್ಲಿ ಗಸ್ತಿನಲ್ಲಿದ್ದ ಪೊಲೀಸರು, ಸಾರ್ವಜನಿಕ ಸ್ಥಳದಲ್ಲಿ ಜೋರಾಗಿ ಕೂಗಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆತ ಆಲ್ದೂರು ಗ್ರಾಮದ ಗಾಳಿಗಂಡಿ ನಿವಾಸಿ 32 ವರ್ಷದ ಸಾದತ್ ಅಲಿ ಎಂದು ಗುರುತಿಸಲಾಯಿತು. ಸಂದೇಹದ ಹಿನ್ನೆಲೆಯಲ್ಲಿ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮೂಡಿಗೆರೆಯ ಸರ್ಕಾರಿ ತಾಲ್ಲೂಕು ಎಂ.ಜಿ.ಎಂ. ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ವೈದ್ಯರು ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾದತ್ ಅಲಿ ವಿರುದ್ಧ ಎನ್ಡಿಪಿಎಸ್ ಕಾಯ್ದೆಯ ಕಲಂ 27(ಬಿ) ಅಡಿಯಲ್ಲಿ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.




