
ಉಡುಪಿ: ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಇಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಆದರೆ ಅವರ ಭೇಟಿಗೆ ಪ್ರತಿಭಟನೆಯ ಬಿಸಿ ಎದುರಾಗಿದ್ದು, ಮೇಕೆದಾಟು ಯೋಜನೆ ಜಾರಿಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ವತಿಯಿಂದ ಕಪ್ಪು ಬಾವುಟ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ಸಿಎಂ ವಿಜಯ್ ಸಂಚರಿಸುವ ವೇಳೆ ಕಪ್ಪು ಬಾವುಟ ಪ್ರದರ್ಶಿಸಲು ಯೋಜಿಸಲಾಗಿದೆ. ವಿಜಯ್ ಅವರ ಭೇಟಿ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸರು ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾಗೂ ಅವರು ಸಂಚರಿಸುವ ಮಾರ್ಗದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಇಂದು ಮಧ್ಯಾಹ್ನ ಕೊಲ್ಲೂರಿಗೆ ಆಗಮಿಸುವ ಸಿಎಂ ವಿಜಯ್ ಅವರು ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಹಿಂದಿರುಗಲಿದ್ದು, ಯಾವುದೇ ಸಾರ್ವಜನಿಕ ಕಾರ್ಯಕ್ರಮ ಅಥವಾ ಸಾರ್ವಜನಿಕ ಭೇಟಿ ಇರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿಶೇಷ ಭದ್ರತಾ ವ್ಯವಸ್ಥೆ ಇರುವ ಕಾರಣ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಭಕ್ತರು ದರ್ಶನಕ್ಕೆ ಬರುವುದನ್ನು ಸಾಧ್ಯವಾದಷ್ಟು ತಪ್ಪಿಸುವಂತೆ ಮನವಿ ಮಾಡಲಾಗಿದೆ. ವಾಹನಗಳ ಕಾನ್ವಾಯ್ ಹಾದಿ, ಪ್ರವೇಶ ದ್ವಾರ ಹಾಗೂ ದೇವಸ್ಥಾನದ ಆವರಣದಲ್ಲಿ ಜನಸಂದಣಿ ಮಾಡದಂತೆ ಸೂಚನೆ ನೀಡಲಾಗಿದ್ದರೂ, ಭಕ್ತಾದಿಗಳಿಗೆ ಯಾವುದೇ ಸಮಯದಲ್ಲೂ ದೇವಸ್ಥಾನ ಪ್ರವೇಶಕ್ಕೆ ನಿಷೇಧ ಇರುವುದಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ಆರ್ ಅವರು ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದು ಚಿನ್ನದ ಖಡ್ಗವನ್ನು ಅರ್ಪಿಸಿದ್ದರೆ, ಬಳಿಕ ಜಯಲಲಿತಾ ಅವರು ಕೂಡ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಜೋಸೆಫ್ ವಿಜಯ್ ಅವರು ಮೂಕಾಂಬಿಕಾ ದರ್ಶನ ಪಡೆಯುತ್ತಿರುವ ಮೂರನೇ ತಮಿಳುನಾಡು ಮುಖ್ಯಮಂತ್ರಿಯಾಗಲಿದ್ದಾರೆ.



