
ಶಿವಮೊಗ್ಗ: ಮಳೆಗಾಲದ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಆಗುಂಬೆ ಘಾಟಿಯಲ್ಲಿ ಜೂನ್ 15ರಿಂದ ಮಳೆಗಾಲ ಮುಗಿಯುವವರೆಗೆ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ–ಮಲ್ಪೆ–ಉಡುಪಿ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಓಡಾಟದಿಂದ ರಸ್ತೆ ಬದಿಯಲ್ಲಿ ಭೂಕುಸಿತ ಸಂಭವಿಸುವ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ಪ್ರಮುಖ ಸಂಪರ್ಕ ಮಾರ್ಗವಾದ ಹುಲಿಕಲ್ ಘಾಟಿಯಲ್ಲೂ ಭೂಕುಸಿತ ಸಂಭವಿಸಿದ್ದು, ಅಲ್ಲಿ ಕೈಗೊಳ್ಳಲಾಗುತ್ತಿರುವ ತಾತ್ಕಾಲಿಕ ರಕ್ಷಣಾತ್ಮಕ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆಗುಂಬೆ ಘಾಟಿ ಮಾರ್ಗವು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಜನರಿಗೆ ಉಡುಪಿ, ಮಂಗಳೂರು ಮತ್ತು ಮಣಿಪಾಲ್ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ. ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ತೆರಳುವ ವಾಹನಗಳು ತೀರ್ಥಹಳ್ಳಿ–ನಗರ–ನಾಗೋಡಿ–ಕೊಲ್ಲೂರು–ಕುಂದಾಪುರ–ಉಡುಪಿ ಅಥವಾ ತೀರ್ಥಹಳ್ಳಿ–ಶೃಂಗೇರಿ–ಕೆರೆಕಟ್ಟೆ–ಬಜಗೋಳಿ–ಕಾರ್ಕಳ–ಉಡುಪಿ ಮಾರ್ಗ ಬಳಸಬೇಕು. ಉಡುಪಿಯಿಂದ ತೀರ್ಥಹಳ್ಳಿ ಕಡೆಗೆ ಬರುವ ವಾಹನಗಳು ಉಡುಪಿ–ಕುಂದಾಪುರ–ಕೊಲ್ಲೂರು–ನಾಗೋಡಿ–ನಗರ–ತೀರ್ಥಹಳ್ಳಿ ಅಥವಾ ಉಡುಪಿ–ಕಾರ್ಕಳ–ಬಜಗೋಳಿ–ಕೆರೆಕಟ್ಟೆ–ಶೃಂಗೇರಿ–ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಮಳೆಗಾಲದಲ್ಲಿ ಸಂಭವಿಸಬಹುದಾದ ಭೂಕುಸಿತ ಹಾಗೂ ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.




