
ಬೆಂಗಳೂರು: ಸುಪ್ರೀಂ ಕೋರ್ಟ್ನ ಕಟ್ಟುನಿಟ್ಟಿನ ನಿರ್ದೇಶನಗಳ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಬೀದಿ ನಾಯಿಗಳ ನಿರ್ವಹಣೆ ಕುರಿತು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಜೂನ್ 11, 2026ರಿಂದಲೇ ಆದೇಶ ಜಾರಿಯಾಗಿದೆ. ಹೊಸ ನಿಯಮಗಳ ಪ್ರಕಾರ ಬೀದಿ ನಾಯಿಗಳಿಗೆ ಆಹಾರ ನೀಡುವುದನ್ನು ನಿಷೇಧಿಸಲಾಗಿಲ್ಲ, ಆದರೆ ಇನ್ನು ಮುಂದೆ ಎಲ್ಲೆಂದರಲ್ಲಿ ಆಹಾರ ಅಥವಾ ಬಿಸ್ಕೆಟ್ ಹಾಕಲು ಅವಕಾಶವಿಲ್ಲ. GBA ಗುರುತಿಸಿರುವ ನಿಗದಿತ ಫೀಡಿಂಗ್ ಸ್ಪಾಟ್ಗಳಲ್ಲಿ ಮಾತ್ರ ನಾಯಿಗಳಿಗೆ ಆಹಾರ ನೀಡಬೇಕು. ನಗರದಲ್ಲಿನ ಐದು ಪಾಲಿಕೆ ವ್ಯಾಪ್ತಿಗಳಲ್ಲಿ ನಾಯಿಗಳ ಸಂಖ್ಯೆಗೆ ಅನುಗುಣವಾಗಿ ಹೊಸ ಫೀಡಿಂಗ್ ಸ್ಪಾಟ್ಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಜೊತೆಗೆ ಯಾವುದೇ ವ್ಯಕ್ತಿ ಅಥವಾ ನಿವಾಸಿಗಳ ಕಲ್ಯಾಣ ಸಂಘ (RWA) ತಾವೇ ಬೀದಿ ನಾಯಿಗಳನ್ನು ಹಿಡಿದು ಬೇರೆ ಪ್ರದೇಶಗಳಿಗೆ ಸ್ಥಳಾಂತರಿಸುವಂತಿಲ್ಲ. ಈ ರೀತಿಯ ಕ್ರಮ ಕೈಗೊಂಡರೆ ಅದು ಕಾನೂನುಬಾಹಿರವಾಗಿದ್ದು, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶದಂತೆ, ಕೇವಲ ಸಂಬಂಧಿತ ಐದು ಮುನ್ಸಿಪಲ್ ಕಾರ್ಪೊರೇಶನ್ಗಳ ನಿಯೋಜಿತ ಅಧಿಕಾರಿಗಳು ಮಾತ್ರ ನಾಯಿಗಳನ್ನು ಅಧಿಕೃತ ಶೆಲ್ಟರ್ಗಳಿಗೆ ಸ್ಥಳಾಂತರಿಸುವ ಅಧಿಕಾರ ಹೊಂದಿದ್ದಾರೆ. ಅಲ್ಲದೆ ಬೀದಿ ನಾಯಿಗಳಿಗೆ ಕಿರುಕುಳ ನೀಡುವುದು, ಕಲ್ಲು ಎಸೆಯುವುದು, ಹಲ್ಲೆ ಮಾಡುವುದು ಅಥವಾ ಯಾವುದೇ ರೀತಿಯ ಹಿಂಸೆ ನೀಡುವುದು ಕಾನೂನುಬಾಹಿರವಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ತಮ್ಮ ಬಡಾವಣೆಯಲ್ಲಿ ಅಧಿಕೃತ ಫೀಡಿಂಗ್ ಸ್ಪಾಟ್ಗಳನ್ನು ಗುರುತಿಸುವಂತೆ ಮನವಿ ಸಲ್ಲಿಸಲು ನಾಗರಿಕರು GBA ಸಹಾಯವಾಣಿ 1533ಕ್ಕೆ ಕರೆ ಮಾಡಬಹುದಾಗಿದೆ. ಬೀದಿ ನಾಯಿಗಳ ವಿಚಾರದಲ್ಲಿ ಪ್ರಾಣಿ ದಯಾ ಸಂಘಟನೆಗಳು, ನಾಗರಿಕರು ಮತ್ತು ನಿವಾಸಿಗಳ ಸಂಘಗಳ ನಡುವೆ ಅನಗತ್ಯ ವಿವಾದಗಳು ಉಂಟಾಗದಂತೆ ಪರಸ್ಪರ ಸಹಕಾರ ಮತ್ತು ಗೌರವದಿಂದ ನಡೆದುಕೊಳ್ಳುವಂತೆ ಗ್ರೇಟರ್ ಬೆಂಗಳೂರು ಅಥಾರಿಟಿಯ ಮುಖ್ಯ ಆಯುಕ್ತರು ಮನವಿ ಮಾಡಿದ್ದು, ಹೆಚ್ಚಿನ ಮಾಹಿತಿಗಾಗಿ 1533 ಸಹಾಯವಾಣಿ ಅಥವಾ ಪಶುಪಾಲನಾ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ.




