
ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಬಿದಿರುತಳ ಬಸ್ ನಿಲ್ದಾಣದ ಬಳಿ ಭೂಮಿಯ ತೇವಾಂಶ ಹೆಚ್ಚಾದ ಪರಿಣಾಮ ಬಂಡೆಯೊಂದು ಕುಸಿದ ಘಟನೆ ನಡೆದಿದೆ. ಮಲೆನಾಡಿನಲ್ಲಿ ಕಳೆದ ಒಂದು ತಿಂಗಳಿಂದ ನಿರಂತರವಾಗಿ ಸಾಧಾರಣ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಘಾಟಿ ಪ್ರದೇಶಗಳಲ್ಲಿ ಭೂಮಿಯ ತೇವಾಂಶ ಹೆಚ್ಚಾಗಿದ್ದು, ಇದೇ ಕಾರಣದಿಂದ ಬಂಡೆ ಕುಸಿದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಡೆ ಕುಸಿತ ಸಂಭವಿಸಿದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ ಹಾಗೂ ವಾಹನ ಸಂಚಾರಕ್ಕೂ ಯಾವುದೇ ಅಡಚಣೆ ಉಂಟಾಗಿಲ್ಲ. ಮಲೆನಾಡಿನ ವಿವಿಧ ಭಾಗಗಳಲ್ಲಿ ಆಗಾಗ ಮಳೆಯಾಗುತ್ತಿರುವುದರಿಂದ ಚಾರ್ಮಾಡಿ ಸೇರಿದಂತೆ ಘಾಟಿ ಪ್ರದೇಶಗಳಲ್ಲಿ ಸಂಚರಿಸುವ ಸಾರ್ವಜನಿಕರು ಮತ್ತು ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.




