
ಚಿಕ್ಕಮಗಳೂರು: ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಟಿಡಿ ರಾಜೇಗೌಡ ಮರು ಮತ ಎಣಿಕೆಯಲ್ಲಿ ಮತಗಳ ಟ್ಯಾಂಪರಿಂಗ್ ನಡೆದಿದ್ದು, ತಮ್ಮ ಪರವಾದ ಮಾನ್ಯ ಮತಗಳನ್ನು ಉದ್ದೇಶಪೂರ್ವಕವಾಗಿ ಅಮಾನ್ಯಗೊಳಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. 2023ರ ಚುನಾವಣೆಯ ಮೂಲ ಮತ ಎಣಿಕೆ ವೇಳೆ ಎಲ್ಲಾ ಪಕ್ಷಗಳ ಕೌಂಟಿಂಗ್ ಏಜೆಂಟ್ಗಳ ಸಮ್ಮುಖದಲ್ಲಿ ಪಾರದರ್ಶಕವಾಗಿ ಮತ ಎಣಿಕೆ ನಡೆದಿದ್ದು, ಆಗ ತಾವು ಗೆದ್ದಿರುವುದಾಗಿ ಘೋಷಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಬಳಿಕ ತಮ್ಮ ವಿರುದ್ಧ ಹಲವು ಆರೋಪ ಮಾಡಿ ಕೇಸ್ ದಾಖಲಿಸಲಾಗಿದ್ದು, ಹೈಕೋರ್ಟ್ ಆದೇಶದಂತೆ ಮರು ಎಣಿಕೆ ನಡೆಸಲಾಗಿದೆ. ಆದರೆ ಮರು ಎಣಿಕೆ ವೇಳೆ ಬಂಡಲ್ ಬಂಡಲ್ ಮತಗಳು ಅಮಾನ್ಯಗೊಂಡಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಫೊರೆನ್ಸಿಕ್ ಪರೀಕ್ಷೆ ನಡೆಸಿ ನ್ಯಾಯಯುತ ತನಿಖೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗಕ್ಕೂ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ಶಾಸಕ ಡಿ.ಎನ್. ಜೀವರಾಜ್ ವಿರುದ್ಧ ದಾಖಲಾಗಿದ್ದ ಅಂಚೆ ಮತ ತಿದ್ದುಪಡಿ ಆರೋಪದ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ನ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಪೀಠ ನಡೆಸಿದ್ದು, ದೂರುದಾರರ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಜೂನ್ 3ರವರೆಗೆ ವಿಚಾರಣೆಯನ್ನು ಮುಂದೂಡಿ ಮಧ್ಯಂತರ ತಡೆಯಾಜ್ಞೆ ನೀಡಿದೆ. ಶಾಸಕ ಡಿ.ಎನ್. ಜೀವರಾಜ್, ಕೆ.ಎನ್. ರಮೇಶ್ ಹಾಗೂ ವೇದಮೂರ್ತಿ ಸಲ್ಲಿಸಿದ್ದ ಅರ್ಜಿಗಳಿಗೂ ಹೈಕೋರ್ಟ್ ಮಧ್ಯಂತರ ರಿಲೀಫ್ ನೀಡಿರುವುದು ಪ್ರಕರಣಕ್ಕೆ ಮತ್ತಷ್ಟು ರಾಜಕೀಯ ಹಾಗೂ ಕಾನೂನು ತೀವ್ರತೆ ತಂದಿದೆ.



