
ಶೃಂಗೇರಿ: ಅವಸಾನದಲ್ಲಿ ಇದ್ದ ಸನಾತನ ಧರ್ಮದ ಅಭ್ಯುದಯಕ್ಕಾಗಿ ಶ್ರಮಿಸಿದ ಪರಶಿವನ ಅವತಾರವಾದ ಶಂಕರಾಚಾರ್ಯರು ಅಖಂಡ ಭಾರತವನ್ನು ಪರ್ಯಟಿಸಿ ಭಾವೈಕ್ಯತೆಯನ್ನು ಸಾರಿದ ಮಹನೀಯರು ಎಂದು ಶ್ರೀ ಜೆ.ಸಿ.ಬಿ.ಎಂ ಕಾಲೇಜಿನಲ್ಲಿ ನಡೆದ ಶಂಕರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಯುತ. ಉಮೇಶ ಹರಿಹರ,ಶ್ರೀ ಮಠ, ಶೃಂಗೇರಿ ಇವರು ಮಾತನಾಡಿದರು.
ಶ್ರೀ ವಿಷ್ಣುವು ತನ್ನ ರಾಮ ಕೃಷ್ಣ ಅವತಾರಗಳಲ್ಲಿ ಶಸ್ತ್ರಾಸ್ತ್ರಗಳ ಮೂಲಕ ದುಷ್ಟದಮನವನ್ನು ಮಾಡಿದ್ದು, ಪರಮಶಿವನು ತನ್ನ ಶಂಕರಾವತಾರದಲ್ಲಿ ಸನಾತನ ಧರ್ಮದ ಅಡಿಪಾಯವಾಗಿರುವ ವೇದ ಶಾಸ್ತ್ರಾದಿಗಳನ್ನು ಆಯುಧವನ್ನಾಗಿಸಿಕೊಂಡು ದುಷ್ಟ ಶಿಕ್ಷಣ ಶಿಷ್ಟರಕ್ಷಣೆಯನ್ನು ಮಾಡಿರುವುದು ವಿಶೇಷ. ಧರ್ಮಗ್ರಂಥಗಳಾದ ಭಗವದ್ಗೀತೆ, ಬ್ರಹ್ಮಸೂತ್ರ, ಉಪನಿಷತ್ತುಗಳಿಗೆ ಬರೆದ ಭಾಷ್ಯ ಹಾಗೂ ಅಖಂಡ ಭಾರತದ ಪರ್ಯಟನೆಯ ಮುಖಾಂತರ ತಮ್ಮ ಅವತಾರದ ೩೨ ವರ್ಷಗಳ ಅವಧಿಯಲ್ಲಿ ಸನಾತನ ಧರ್ಮದ ಅನುಯಾಯಿಗಳಲ್ಲಿ ಐಕ್ಯಮತ್ಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿ ಧರ್ಮಪ್ರಚಾರಕ್ಕಾಗಿ ಚತುರಾಮ್ನಾಯ ಪೀಠ ಸ್ಥಾಪನೆ ಮಾಡಿದ ಮಹಾನ್ ತತ್ವಜ್ಞಾನಿಯೇ ಶ್ರೀ ಶಂಕರರು. ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕಗೊಳಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಸ್ವಾಮಿ ಇವರು ತತ್ವಕ್ಞಾನಿಗಳ ದಿನಾಚರಣೆಯ ಮಹತ್ವ ಹಾಗೂ ಪ್ರಸ್ತುತತೆಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀಲಕ್ಷ್ಮೀ, ಕು.ಸರಸ್ವತಿ ಇವರು ಶಂಕರರ ಸ್ತೋತ್ರಗಳನ್ನು ಪ್ರಸ್ತುತ ಪಡಿಸಿದರು. ಜ್ಯೋತಿ ಕಾಕತ್ಕರ್ ಸ್ವಾಗತಿಸಿ., ಎ.ಜಿ.ಪ್ರಶಾಂತ, ಉಪಪ್ರಾಂಶುಪಾಲರು ನಿರೂಪಿಸಿ ವಂದಿಸಿದರು. ಡಾ.ವಸಂತ್ ಚೌಹಾಣ್ ಐ.ಕ್ಯೂ.ಎ.ಸಿ ಸಂಚಾಲಕರು, ಗ್ರಂಥಪಾಲಕರಾದ ಶಿವಕುಮಾರ್, ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





