
ಕಾರ್ಕಳ: ‘ಸ್ವರ್ಣ ಕಾರ್ಕಳ’ ಪರಿಕಲ್ಪನೆಯಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆಗಳನ್ನು ಜಾರಿಗೆ ತಂದು ಅಭಿವೃದ್ಧಿಯ ವೇಗವನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಜೂನ್ 27ರಂದು ಕಾರ್ಕಳ ಪತ್ರಿಕಾ ಭವನದಲ್ಲಿ ಕಾರ್ಕಳ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ಸಚಿವರಾಗಿದ್ದ ಅವಧಿಯಲ್ಲಿ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿತ್ತು ಎಂದು ತಿಳಿಸಿದರು. ರಸ್ತೆ, ಸೇತುವೆ, ಕುಡಿಯುವ ನೀರು, ವಿದ್ಯುತ್, ಗ್ರಾಮೀಣ ಸಂಪರ್ಕ ರಸ್ತೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಳಸಲಾಗಿದೆ. ಸಂಪರ್ಕವಿಲ್ಲದ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದ್ದು, ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಅಭಿವೃದ್ಧಿಯ ವೇಗವನ್ನು ಮುಂದುವರಿಸಲಾಗುವುದು ಎಂದು ಹೇಳಿದರು.
ಪರಶುರಾಮ ಥೀಮ್ ಪಾರ್ಕ್ ವಿವಾದ
ಪರಶುರಾಮ ಥೀಮ್ ಪಾರ್ಕ್ ಕುರಿತು ಪ್ರತಿಕ್ರಿಯಿಸಿದ ಸುನಿಲ್ ಕುಮಾರ್, ಯೋಜನೆಯ ಇಂದಿನ ಸ್ಥಿತಿಗೆ ಮುನಿಯಾಲು ಉದಯಕುಮಾರ್ ಶೆಟ್ಟಿಯೇ ಕಾರಣ ಎಂದು ಆರೋಪಿಸಿದರು. ಅಭಿವೃದ್ಧಿ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಂಡು ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಟೀಕಿಸಿದರು. ಪರಶುರಾಮ ಥೀಮ್ ಪಾರ್ಕ್ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಬೇಕು ಹಾಗೂ ಸಾರ್ವಜನಿಕ ಆಸ್ತಿಯನ್ನು ಜನರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಸಿಬ್ಬಂದಿ ಪ್ರಕರಣಕ್ಕೆ ಕ್ರಮ ಆಗಲಿ
ಕಾರ್ಕಳ ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಯೋಜನಾ ನಿರ್ದೇಶಕರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆರೋಪಗಳು ಸತ್ಯವಾಗಿದ್ದರೆ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸರ್ಕಾರಿ ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿಯ ಗೌರವ ಮತ್ತು ಸುರಕ್ಷತೆಗೆ ಯಾವುದೇ ಧಕ್ಕೆಯಾಗಬಾರದು ಎಂದು ಹೇಳಿದರು.
9/11 ವಿಶೇಷ ಪ್ರಾಧಿಕಾರ ರದ್ದತಿ
9/11 ವಿಶೇಷ ಪ್ರಾಧಿಕಾರ ರದ್ದತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಸುನಿಲ್ ಕುಮಾರ್, ಸರ್ಕಾರಕ್ಕೆ ಪ್ರಾಧಿಕಾರವನ್ನು ರದ್ದುಗೊಳಿಸುವ ಇಚ್ಛಾಶಕ್ತಿಯೇ ಇಲ್ಲ ಎಂದು ಆರೋಪಿಸಿದರು. ಮೂರು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಈ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ದೃಢ ನಿರ್ಧಾರ ಕೈಗೊಂಡಿಲ್ಲ. ಭೂಮಾಪಕರ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಜನಹಿತವೇ ಮುಖ್ಯ
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯಕ್ಕಿಂತ ಜನಹಿತವೇ ಮುಖ್ಯವಾಗಬೇಕು. ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ಕೃಷಿ ಹಾಗೂ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಯೋಜನೆಗಳಿಗೆ ಆದ್ಯತೆ ನೀಡಿ ಕಾರ್ಕಳವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವ ಗುರಿಯಿದೆ ಎಂದು ಹೇಳಿದರು.
ಸಂವಾದದಲ್ಲಿ ಪತ್ರಕರ್ತರು ಕೇಳಿದ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕ್ಷೇತ್ರದ ಪ್ರಮುಖ ಅಭಿವೃದ್ಧಿ ಯೋಜನೆಗಳು, ಸರ್ಕಾರದ ವಿವಿಧ ಕಾರ್ಯಕ್ರಮಗಳು ಹಾಗೂ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಉದಯ ಕುಮಾರ್ ಮುಂಡ್ಕೂರು, ಜಿಲ್ಲಾ ಕೋಶಾಧಿಕಾರಿ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹರೀಶ್ ಸಚ್ಚರಿಪೇಟೆ ಉಪಸ್ಥಿತರಿದ್ದರು. ಕಾರ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.




