
ಕಾರ್ಕಳ: ಶಾಸಕ ವಿ. ಸುನಿಲ್ ಕುಮಾರ್ ಅವರು ಇತ್ತೀಚೆಗೆ ಪತ್ರಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ ಕಾಂಗ್ರೆಸ್ ವಿರುದ್ಧ ಮಾಡಿರುವ ಆರೋಪಗಳಿಗೆ ಕಾಂಗ್ರೆಸ್ ಮುಖಂಡರು ತೀವ್ರ ತಿರುಗೇಟು ನೀಡಿದ್ದಾರೆ. ಅಭಿವೃದ್ಧಿ ಹಾಗೂ ಹಿಂದುತ್ವದ ಹೆಸರಿನಲ್ಲಿ ಜನರ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬಂದಿರುವ ಸುನಿಲ್ ಕುಮಾರ್ ಅವರು ಇದೀಗ ಭ್ರಷ್ಟಾಚಾರ, ಸುಳ್ಳು ಭರವಸೆ ಹಾಗೂ ಜನರನ್ನು ದಾರಿ ತಪ್ಪಿಸುವ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
‘ಅಭಿವೃದ್ಧಿ ಹರಿಕಾರ ಅಲ್ಲ, ಸುಳ್ಳಿನ ಸೌಹುಕಾರ’
ಸ್ವತಃ ತಮ್ಮನ್ನು ಅಭಿವೃದ್ಧಿ ಹರಿಕಾರ ಎಂದು ಬಿಂಬಿಸಿಕೊಳ್ಳುತ್ತಿರುವ ಶಾಸಕರು, ಒಳ್ಳೆಯ ಕೆಲಸಗಳನ್ನೆಲ್ಲ ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಕಾಮಗಾರಿಗಳು ವಿಫಲವಾದಾಗ ಅಥವಾ ಸಮಸ್ಯೆಗಳು ಎದುರಾದಾಗ ಅದರ ಹೊಣೆಯನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಹೊರಿಸುತ್ತಾರೆ. ಇದೇ ಅವರ ರಾಜಕೀಯದ ಮೂಲ ತಂತ್ರವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಟೀಕಿಸಿದರು.
ಸಂಸದರ ಅನುದಾನಕ್ಕೂ ತಮ್ಮದೇ ಪ್ರಚಾರ
ಸಂಸದರ ಅನುದಾನದಲ್ಲಿ ನಡೆದ ಕಾಮಗಾರಿಗಳಿಗೂ ತಮ್ಮದೇ ಭಾವಚಿತ್ರ ಅಳವಡಿಸಿಕೊಂಡು ಪ್ರಚಾರ ನಡೆಸಿರುವುದು ಜನರಿಗೆ ತಿಳಿದಿದೆ. ಅಭಿವೃದ್ಧಿ ಮಾಡಿದವರು ಬೇರೆ, ಪ್ರಚಾರ ಪಡೆಯುತ್ತಿರುವವರು ಬೇರೆ ಎಂಬ ಪರಿಸ್ಥಿತಿ ಕಾರ್ಕಳದಲ್ಲಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಪರಶುರಾಮ ಥೀಮ್ ಪಾರ್ಕ್ ವಿವಾದ
ಪರಶುರಾಮ ಥೀಮ್ ಪಾರ್ಕ್ ಯೋಜನೆಯನ್ನು ಆರಂಭದಲ್ಲಿ ಎಲ್ಲರೂ ಸ್ವಾಗತಿಸಿದ್ದೆವು. ಆದರೆ ನಕಲಿ ಪ್ರತಿಮೆ ಸ್ಥಾಪಿಸಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಬಳಿಕ ನಾವು ವಿರೋಧಿಸಬೇಕಾಯಿತು. ಶಾಸಕರು ಪ್ರಾಮಾಣಿಕರಾಗಿದ್ದರೆ ಪ್ರತಿಮೆಯನ್ನು ರಾತ್ರೋರಾತ್ರಿ ಸ್ಥಳಾಂತರಿಸುವ ಅಗತ್ಯ ಏನಿತ್ತು ಎಂಬುದಕ್ಕೆ ಉತ್ತರ ನೀಡಬೇಕು. ಈ ಹೋರಾಟವನ್ನು ಆರಂಭಿಸಿದ್ದು ಬಿಜೆಪಿಯವರೇ ಎಂಬುದನ್ನು ಮರೆಯಬಾರದು ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.
ಎಣ್ಣೆಹೊಳೆ ಸೇರಿದಂತೆ ಹಲವು ಯೋಜನೆಗಳ ವಿರುದ್ಧ ಆರೋಪ
ಎಣ್ಣೆಹೊಳೆ ಏತ ನೀರಿನ ಯೋಜನೆ, ಜವಳಿ ಪಾರ್ಕ್, ಒಳಚರಂಡಿ ಕಾಮಗಾರಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಈಜುಕೊಳ, ನರ್ಸಿಂಗ್ ಕಾಲೇಜು, ಕುಡಿಯುವ ನೀರಿನ ಬಾವಿ, ಹಲಸು ಅಭಿವೃದ್ಧಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ವಿಫಲವಾಗಿದ್ದು, ಅವುಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಎಲ್ಲ ಯೋಜನೆಗಳಲ್ಲಿ ಜನರ ಹಣ ವ್ಯರ್ಥವಾಗಿದೆ ಎಂದು ದೂರಿದರು.
ಆಸ್ಪತ್ರೆ, ಆರೋಗ್ಯ ಸೇವೆ ನಿರ್ಲಕ್ಷ್ಯ
ಕಾರ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಮೂಲಸೌಕರ್ಯದ ಅಭಾವ ಇದ್ದಾಗ ಒಂದು ದಿನವೂ ಭೇಟಿ ನೀಡದ ಶಾಸಕರು ಇಂದು ಅಭಿವೃದ್ಧಿಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ. ಆಗಿನ ಆರೋಗ್ಯ ಸಚಿವರು ಘೋಷಿಸಿದ್ದ ತುರ್ತು ವಾಹನ ಸೇವೆಯನ್ನು ಜಾರಿಗೆ ತರಲು ಸಹ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಆರೋಪಿಸಿದರು.
ಕೇಂದ್ರದ ಅನುದಾನ ಎಷ್ಟು?
ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲ ಎಂದು ಆರೋಪಿಸುವ ಸುನಿಲ್ ಕುಮಾರ್ ಅವರು, ಕೇಂದ್ರ ಸರ್ಕಾರ ಹಾಗೂ ಸಂಸದರ ಅನುದಾನದಿಂದ ಕಾರ್ಕಳ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲಿ ಎಂದು ಕಾಂಗ್ರೆಸ್ ನಾಯಕರು ಸವಾಲು ಹಾಕಿದರು.
‘ಜನರೇ ತೀರ್ಪು ನೀಡಲಿದ್ದಾರೆ’
ಪರಶುರಾಮ ಥೀಮ್ ಪಾರ್ಕ್ ಹೆಸರಿನಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಕೋಟ್ಯಂತರ ರೂಪಾಯಿ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡರು, ಮುಂಬರುವ ಚುನಾವಣೆಯಲ್ಲಿ ಜನರು ಎಲ್ಲವನ್ನೂ ಗಮನಿಸಿ ಸೂಕ್ತ ತೀರ್ಪು ನೀಡಲಿದ್ದಾರೆ ಎಂದು ಹೇಳಿದರು. ಸಂಸ್ಕಾರ, ಸಂಸ್ಕೃತಿ ಹಾಗೂ ಧರ್ಮದ ಬಗ್ಗೆ ಮಾತನಾಡುವ ಸುನಿಲ್ ಕುಮಾರ್ ಅವರು ಪರಶುರಾಮ ಥೀಮ್ ಪಾರ್ಕ್ ಹಾಗೂ ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಆತ್ಮಸಾಕ್ಷಿಯಾಗಿ ಸಾರ್ವಜನಿಕವಾಗಿ ಹೇಳಲಿ ಎಂದು ಸವಾಲು ಹಾಕಿದರು.




