ಬೈಲೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ, ಬೈಲೂರು ಇಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಿವೃತ್ತ ಯೋಧರಾದ ರಾಜೇಶ್ ದೇವಾಡಿಗ, ಬೈಲೂರು ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಯಾರದ್ದೋ ಉಡುಗೊರೆಯಲ್ಲ, ಅದು ತ್ಯಾಗ ಮತ್ತು ಬಲಿದಾನಗಳ ಮೂಲಕ ಪಡೆದುಕೊಂಡಿರುವ ಅಮೂಲ್ಯವಾದದ್ದು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ನಾವು ಸದಾ ಸ್ಮರಿಸಬೇಕು ಮತ್ತು ಗೌರವಿಸಬೇಕು ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ವಸಂತ ಕುಲಾಲ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಉದ್ಯಮಿ ಜಾರ್ಕಳ ರಾಜೇಶ್ ಶೆಟ್ಟಿ ಅವರು ಮಕ್ಕಳಿಗೆ ಕೊಡಮಾಡಿದ ಐಡಿ ಕಾರ್ಡ್ಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿಶಿರ್ ಶೆಟ್ಟಿ, ಗೌರವಾಧ್ಯಕ್ಷ ಸದಾನಂದ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಹರೀಶ ಆಚಾರ್ಯ, ಸಂಯೋಜಕ ಆನಂದ ಪೂಜಾರಿ, ಶಾಲೆಯ ಮುಖ್ಯೋಪಾಧ್ಯಾಯಿನಿ ವಸಂತಿ ಹೆಚ್.ಜಿ. ಹಾಗೂ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ರೂಪ ಆಚಾರ್ಯ ಉಪಸ್ಥಿತರಿದ್ದರು. ಬಸ್ರಿ ಶಾಲೆಯ ಹಳೆ ವಿದ್ಯಾರ್ಥಿಗಳಾಗಿದ್ದು, ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಅಂಕ ಗಳಿಸಿದ ಹತ್ತು ಮಂದಿ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಯೋಧ ರಾಜೇಶ್ ದೇವಾಡಿಗ ಹಾಗೂ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಗೆ ವಿಶೇಷ ದೇಣಿಗೆ ನೀಡಿ ಸಹಕರಿಸಿದ ಹಸೈನರ್ ಬೈಲೂರು ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು. ಸಹ ಶಿಕ್ಷಕ ದಿನೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ವಸಂತಿ ಹೆಚ್.ಜಿ. ಸ್ವಾಗತಿಸಿದರು ಹಾಗೂ ಸಹ ಶಿಕ್ಷಕಿ ಕಾವೇರಿ ವಂದಿಸಿದರು.
