
ಚಿಕ್ಕಮಗಳೂರು: ಶೃಂಗೇರಿಯಿಂದ ರಾತ್ರಿ 10.30ರ ಸುಮಾರಿಗೆ ಚಿಕ್ಕಮಗಳೂರಿಗೆ ಆಗಮಿಸಿದ ಕೋಲಾರ ಡಿಪೋಗೆ ಸೇರಿದ ಸರ್ಕಾರಿ ಬಸ್ನ ಹೆಡ್ಲೈಟ್ ಸಮಸ್ಯೆ ಎದುರಾಗಿದ್ದು, ಹೆಡ್ಲೈಟ್ ಇಲ್ಲದಿದ್ದರೂ ಚಾಲಕ ಸುಮಾರು 60 ಕಿ.ಮೀ. ದುರ್ಗಮ ಮಾರ್ಗದಲ್ಲಿ ಬಸ್ನ್ನು ಸುರಕ್ಷಿತವಾಗಿ ಚಲಾಯಿಸಿರುವ ಘಟನೆ ನಡೆದಿದೆ. ಚಿಕ್ಕಮಗಳೂರು–ಬಾಳೆಹೊನ್ನೂರು ಮಾರ್ಗದಲ್ಲಿ ಭಾರೀ ಪ್ರಮಾಣದ ಗುಂಡಿ-ಗೊಟರುಗಳಿದ್ದು, ಅರಣ್ಯ ಹಾಗೂ ಕಾಫಿ ತೋಟಗಳ ನಡುವೆ ಸಾಗುವ ಈ ರಸ್ತೆಯಲ್ಲಿ ಹಗಲಿನಲ್ಲೇ ಸಂಚಾರ ಕಷ್ಟಕರವಾಗಿದೆ. ಅದರಲ್ಲೂ ಅಪಾಯಕಾರಿ ತಿರುವುಗಳು ಹಾಗೂ ಗುಂಡಿ ಬಿದ್ದ ರಸ್ತೆಯಲ್ಲಿ ರಾತ್ರಿ ವೇಳೆ ಹೆಡ್ಲೈಟ್ ಸಮಸ್ಯೆಯ ನಡುವೆಯೂ ಚಾಲಕ ಎಚ್ಚರಿಕೆಯಿಂದ ಬಸ್ನ್ನು ಚಲಾಯಿಸಿರುವ ದೃಶ್ಯಗಳು ಬೈಕ್ ಸವಾರರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಬಸ್ನ ಹೆಡ್ಲೈಟ್ ಅರ್ಧದಲ್ಲೇ ಕೈಕೊಟ್ಟಿತ್ತೋ ಅಥವಾ ಸಮಯಕ್ಕೆ ಸರಿಯಾಗಿ ದುರಸ್ತಿ ಮಾಡದಿರುವುದೋ ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿ ಸರ್ಕಾರಿ ಬಸ್ಗಳ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ದುರ್ಗಮ ರಸ್ತೆಯಲ್ಲಿ ರಾತ್ರಿ ವೇಳೆ ಹೆಡ್ಲೈಟ್ ಸಮಸ್ಯೆಯ ನಡುವೆಯೂ ಪ್ರಯಾಣಿಕರನ್ನು ಸುರಕ್ಷಿತವಾಗಿ ಜಿಲ್ಲಾ ಕೇಂದ್ರಕ್ಕೆ ತಲುಪಿಸಿದ ಸರ್ಕಾರಿ ಬಸ್ ಚಾಲಕನ ಕಾರ್ಯಕ್ಕೆ ಮಲೆನಾಡಿಗರು ಅಭಿನಂದನೆ ಸಲ್ಲಿಸಿದ್ದಾರೆ.




