
ಅಜೆಕಾರು: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಅಜೆಕಾರು ಜ್ಞಾನಸುಧಾ ಪದವಿಪೂರ್ವ ಕಾಲೇಜು ಹಾಗೂ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪದ್ಮನಗರದಲ್ಲಿ “ಆರೋಗ್ಯಕರ ಜೀವನಕ್ಕಾಗಿ ಯೋಗ” ಎಂಬ ಘೋಷವಾಕ್ಯದೊಂದಿಗೆ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮುನಿಯಾಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಿಕಾ ಕಿಣಿ ಮಾತನಾಡಿ, ವಿಶ್ವದ ಸಂಸ್ಕೃತಿ ಪರಂಪರೆಗೆ ಭಾರತ ನೀಡಿದ ಅತ್ಯುತ್ತಮ ಕೊಡುಗೆ ಯೋಗವಾಗಿದ್ದು, ಇದು ನಮ್ಮ ಪ್ರಾಚೀನ ಋಷಿಮುನಿಗಳ ಸಾವಿರಾರು ವರ್ಷಗಳ ಸಾಧನೆಯ ಫಲವಾಗಿದೆ ಎಂದರು. ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುವುದರ ಜೊತೆಗೆ ಮನಸ್ಸನ್ನು ಹತೋಟಿಯಲ್ಲಿಟ್ಟು ಆರೋಗ್ಯಕರ ಜೀವನ ನಡೆಸಲು ನೆರವಾಗುತ್ತದೆ ಎಂದು ತಿಳಿಸಿದರು. ಯೋಗವು ಕೇವಲ ಒಂದು ದಿನದ ಆಚರಣೆಯಾಗದೇ, ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಅವರು ಕರೆ ನೀಡಿದರು. ಇದೇ ಸಂದರ್ಭದಲ್ಲಿ 9ನೇ ತರಗತಿ ವಿದ್ಯಾರ್ಥಿ ಕುಮಾರ್ ಸೋಹನ್ ವಿಶ್ವ ಯೋಗ ದಿನದ ಮಹತ್ವದ ಕುರಿತು ಮಾಹಿತಿ ನೀಡಿದರೆ, ರಾಷ್ಟ್ರೀಯ ಯೋಗ ಪಟು ವಿದ್ಯಾರ್ಥಿನಿ ಕುಮಾರಿ ಅನ್ವಿ ಅಂಚನ್ ಅವರನ್ನು ಸನ್ಮಾನಿಸಿ, ಅವರಿಂದ ಯೋಗ ಪ್ರದರ್ಶನ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲೆ ಆರತಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಪ್ರಾಂಶುಪಾಲ ಸಂತೋಷ್ ಪೂಜಾರಿ ಸಭೆಯನ್ನುದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಗೂ ಯೋಗ ಗೀತೆ ಹಾಡಿದ್ದು, ವಿದ್ಯಾರ್ಥಿನಿ ಸಾನ್ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.




