
ಬಿಹಾರ: ಬಿಹಾರದಲ್ಲಿ ನಡೆದ ನೀಟ್ ಯುಜಿ 2026 ಮರು ಪರೀಕ್ಷೆಯಲ್ಲಿ ಭಾರೀ ವಂಚನೆ ಯತ್ನ ಬಯಲಾಗಿದ್ದು, ಇತರ ಅಭ್ಯರ್ಥಿಗಳ ಬದಲಿಗೆ ಪರೀಕ್ಷೆ ಬರೆಯಲು ಬಂದಿದ್ದ ಒಂಬತ್ತು ನಕಲಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 21ರಂದು ನಡೆದ ಮರು ಪರೀಕ್ಷೆಯಲ್ಲಿ ದೇಶಾದ್ಯಂತ 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದು, ಬಿಹಾರದ ಹಲವು ಪರೀಕ್ಷಾ ಕೇಂದ್ರಗಳಲ್ಲಿ ನಕಲಿ ಪರೀಕ್ಷೆ ಹಾಗೂ ವಂಚನೆ ನಡೆಯುತ್ತಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರು ಕಟ್ಟುನಿಟ್ಟಿನ ತಪಾಸಣೆ ನಡೆಸಿದ ವೇಳೆ ಲಖಿಸರೈ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಪತ್ತೆಯಾಗಿದೆ. ಕೆಆರ್ಕೆ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ ಒಬ್ಬ, ಕೇಂದ್ರೀಯ ವಿದ್ಯಾಲಯದಲ್ಲಿ ಏಳು ಹಾಗೂ ಹಸನ್ಪುರ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಒಬ್ಬ ನಕಲಿ ಅಭ್ಯರ್ಥಿಯನ್ನು ಬಂಧಿಸಲಾಗಿದೆ. ಬಂಧಿತರು ವಿವಿಧ ಜಿಲ್ಲೆಗಳಿಗೆ ಸೇರಿದವರಾಗಿದ್ದು, ಹಾಲ್ಟಿಕೆಟ್ನಲ್ಲಿ ಇರುವ ಅಭ್ಯರ್ಥಿಗಳ ಬದಲು ಬೇರೆ ವ್ಯಕ್ತಿಗಳು ಪರೀಕ್ಷೆ ಬರೆಯಲು ಬಂದಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ನಕಲಿ ಅಭ್ಯರ್ಥಿಗಳಲ್ಲದೆ ಪರೀಕ್ಷಾ ವಂಚನೆಗೆ ಸಂಬಂಧಿಸಿದಂತೆ ಇನ್ನೂ 21 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಒಟ್ಟು 30 ಮಂದಿಯನ್ನು ಬಂಧಿಸಲಾಗಿದೆ. ಎಸ್ಡಿಎಂ ಪ್ರಭಾಕರ್ ಕುಮಾರ್ ಹಾಗೂ ಎಸ್ಡಿಪಿಒ ಶಿವಂ ಕುಮಾರ್ ಅವರ ನೇತೃತ್ವದಲ್ಲಿ ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ದೊರೆತ ಮಾಹಿತಿಯ ಆಧಾರದ ಮೇಲೆ ವಿಶೇಷ ಪೊಲೀಸ್ ತಂಡಗಳು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸುತ್ತಿವೆ.
ಇದೇ ವೇಳೆ ನೀಟ್ ಯುಜಿ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ ಕುರಿತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಸ್ಪಷ್ಟನೆ ನೀಡಿದೆ. ಎಕ್ಸ್ ಜಾಲತಾಣದಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಜೂನ್ 21ರಂದು ನಡೆದ ಮರು ಪರೀಕ್ಷೆಯನ್ನು ಸಂಪೂರ್ಣ ಭದ್ರತೆ ಮತ್ತು ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಹರಿದಾಡುತ್ತಿರುವ ವಿಡಿಯೋ ಸಂಪೂರ್ಣ ನಕಲಿ ಹಾಗೂ ಅದರಲ್ಲಿರುವ ಆರೋಪಗಳು ಸುಳ್ಳು ಎಂದು ಎನ್ಟಿಎ ಸ್ಪಷ್ಟಪಡಿಸಿದೆ. ಮೇ 3ರಂದು ನಡೆದಿದ್ದ ಮೂಲ ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದಾಗಿದ್ದು, ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಯ ನಂತರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಗಳು ಕೇಳಿಬಂದಿದ್ದವು. ಬಳಿಕ ಪಾರದರ್ಶಕತೆಗೆ ಆದ್ಯತೆ ನೀಡಿ ಮರು ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಈಗ ಮರು ಪರೀಕ್ಷೆಯಲ್ಲೂ ವಂಚನೆ ಯತ್ನಗಳು ಬೆಳಕಿಗೆ ಬಂದಿರುವುದು ಪರೀಕ್ಷಾ ವ್ಯವಸ್ಥೆಯ ಭದ್ರತೆ ಕುರಿತ ಚರ್ಚೆಗೆ ಮತ್ತೆ ಕಾರಣವಾಗಿದೆ.




